ರಿಪ್ಪನ್ ಪೇಟೆ : ಜೀವನದಲ್ಲಿ ಧರ್ಮವನ್ನು ನಿರಂತರವಾಗಿ ಪಾಲಿಸುವುದರಿಂದ ಸಾತ್ವಿಕ ಮನೋಭಾವ ಬೆಳೆಯುತ್ತದೆ. ಬಾಲ್ಯದಿಂದಲೇ ಸಮ್ಯಕ್ ದರ್ಶನ, ಜ್ಞಾನ ಹಾಗೂ ಚಾರಿತ್ರ್ಯ ಎಂಬ ರತ್ನತ್ರಯವನ್ನು ಅಳವಡಿಸಿಕೊಳ್ಳುವುದು ವ್ಯಕ್ತಿತ್ವದ ಪರಿವರ್ತನೆ ಮತ್ತು ಶಾಂತಿಯ ಸಂಕೇತವಾಗಿದೆ ಎಂದು ಹೋಂಬುಜ ಅತಿಶಯ ಕ್ಷೇತ್ರದ ಪೀಠಾಧೀಶ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ಹೇಳಿದರು.
ಶ್ರಾವಣ ನಕ್ಷತ್ರದ ಅಂಗವಾಗಿ ನಡೆದ ರತ್ನತ್ರಯ ಧಾರಣೆ ಕಾರ್ಯಕ್ರಮದಲ್ಲಿ ಅವರು ಮಂಗಳಾಶೀರ್ವಚನ ನೀಡಿ, ಜೈನ ಧರ್ಮದಲ್ಲಿ ಸಮ್ಯಕ್ ದರ್ಶನ, ಸಮ್ಯಕ್ ಜ್ಞಾನ ಮತ್ತು ಸಮ್ಯಕ್ ಚಾರಿತ್ರ್ಯವನ್ನು ರತ್ನತ್ರಯವೆಂದು ಉಲ್ಲೇಖಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಭಕ್ತರಿಗೆ ರತ್ನತ್ರಯ (ಜನಿವಾರ) ವಿತರಿಸಿ ಆಶೀರ್ವದಿಸಲಾಯಿತು. ಪ್ರಾತಃಕಾಲದಲ್ಲಿ ಶ್ರೀ 1008 ಪಾರ್ಶ್ವನಾಥ ತೀರ್ಥಂಕರ ಹಾಗೂ ಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ವಿಶೇಷ ಪೂಜೆ, ವಿಧಿ-ವಿಧಾನಗಳು ನೆರವೇರಿದವು.
ಶ್ರೀ ಕುಂದಕುಂದ ವಿದ್ಯಾಪೀಠ ಗುರುಕುಲದ ವಿದ್ಯಾರ್ಥಿಗಳು ಹಾಗೂ ಊರಿನ ಭಕ್ತರು ರತ್ನತ್ರಯ ಧಾರಣೆಗೆ ಮುನ್ನ ನಮೋಕಾರ ಮಂತ್ರ ಪಠಿಸಿದರು. ಕ್ಷೇತ್ರದ ಎಲ್ಲಾ ಜಿನ ಮಂದಿರಗಳಲ್ಲಿ ಪರಂಪರಾಗತ ಪೂಜೆಯಲ್ಲಿ ಭಕ್ತರು ಭಾಗವಹಿಸಿ ಪ್ರಾರ್ಥನೆ ಸಲ್ಲಿಸಿದರು.
















Leave a Reply