ರಿಪ್ಪನ್ಪೇಟೆ: ರಿಪ್ಪನ್ಪೇಟೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಚಿನ್ನೇಗೌಡ ಕ್ರೀಡಾಂಗಣದಲ್ಲಿ 2026–27ನೇ ಸಾಲಿನ ಕೆರೆಹಳ್ಳಿ ಹೋಬಳಿ ವಲಯ ಮಟ್ಟದ 14 ವರ್ಷ ವಯೋಮಿತಿಯೊಳಗಿನ ಬಾಲಕ-ಬಾಲಕಿಯರ ಕ್ರೀಡಾಕೂಟವು ಧ್ವಜಾರೋಹಣದೊಂದಿಗೆ ಚಾಲನೆ ನೀಡಲಾಯಿತು.
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಕ್ಷೇತ್ರ ಸಮನ್ವಯಾಧಿಕಾರಿಗಳ ಕಚೇರಿ ಹಾಗೂ ಅರಸಾಳು, ಕೆಂಚನಾಲ, ರಿಪ್ಪನ್ಪೇಟೆ, ಬೆಳ್ಳೂರು, ಬಾಳೂರು, ಚಿಕ್ಕಜೇನಿ, ಕೋಡೂರು, ಪುರಪ್ಪೆಮನೆ, ಹರತಾಳು ಮತ್ತು ಹರಿದ್ರಾವತಿ ಸಮೂಹ ಸಂಪನ್ಮೂಲ ಕೇಂದ್ರಗಳ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ವೈ. ಗಣೇಶ್ ಮಾತನಾಡಿ, ಕ್ರೀಡೆ ಮಕ್ಕಳಲ್ಲಿ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಯನ್ನು ಉತ್ತೇಜಿಸುವುದರ ಜೊತೆಗೆ ಏಕಾಗ್ರತೆ, ಶಿಸ್ತು ಮತ್ತು ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವವನ್ನು ಬೆಳೆಸುತ್ತದೆ ಎಂದರು. ವಿದ್ಯಾಭ್ಯಾಸದೊಂದಿಗೆ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ಆರೋಗ್ಯಪೂರ್ಣ ವ್ಯಕ್ತಿತ್ವ ರೂಪಿಸಲು ಅಗತ್ಯವೆಂದು ತಿಳಿಸಿದರು.

ದೈಹಿಕ ಶಿಕ್ಷಣಾಧಿಕಾರಿ ಚಂದ್ರಕಾಂತ್ ಕ್ರೀಡಾಕೂಟ ಉದ್ಘಾಟಿಸಿ, ಕ್ರೀಡೆ ದ್ವೇಷಭಾವನೆ ದೂರಮಾಡಿ ಸ್ನೇಹ ಹಾಗೂ ಸಹಬಾಳ್ವೆಯನ್ನು ಬೆಳೆಸುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿ ರಂಗನಾಥ, ದೈಹಿಕ ಶಿಕ್ಷಕ ವಿನಯ್ ಹೆಗಡೆ,ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಸೋಮಣ್ಣ ಬಂಡಿ,,ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪುಟ್ಟಸ್ವಾಮಿ, ಕಾರ್ಯದರ್ಶಿ ಶಿವಪ್ಪ, ಖಜಾಂಚಿ ಜಗದೀಶ ಕಾಗಿನಲ್ಲಿ , ನಿರ್ದೇಶಕ ಶಿವಮೂರ್ತಿ,ಉದಯಕುಮಾರ್, ಉಮೇಶ್, ಮಹೇಶ್ ಹುಳಗದ್ದೆ, ನಿವೃತ್ತ ದೈಹಿಕ ಶಿಕ್ಷಕ ಚಂದ್ರಬಾಬು, ರಿಪ್ಪನ್ ಪೇಟೆಯ ಡಿ.ವಿ. ಆರ್ ಮೋಟಾರ್ಸ್ ಮಾಲೀಕರಾದ ಜಗದೀಶ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಸಿಆರ್ಪಿ ನಾಗರಾಜ ಸ್ವಾಗತಿಸಿ, ಮಂಜುನಾಥ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

















Leave a Reply