ಕಸ್ತೂರಿರಂಗನ್ ವರದಿ ಜಾರಿ ವಿರುದ್ಧ ರೈತರ ಪಾದಯಾತ್ರೆ- ಬಹಿರಂಗ ಸಭೆ : ಸಂತ್ರಸ್ತರ ಧ್ವನಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ತಲುಪಲಿ : ಬಿ.ವೈ ರಾಘವೇಂದ್ರ

Addaheading 20260830 102029 0000 ಕಸ್ತೂರಿರಂಗನ್ ವರದಿ ಜಾರಿ ವಿರುದ್ಧ ರೈತರ ಪಾದಯಾತ್ರೆ- ಬಹಿರಂಗ ಸಭೆ : ಸಂತ್ರಸ್ತರ ಧ್ವನಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ತಲುಪಲಿ : ಬಿ.ವೈ ರಾಘವೇಂದ್ರ
Spread the love

ಹೊಸನಗರ|ಹೊಸನಗರದಲ್ಲಿ ಕಸ್ತೂರಿರಂಗನ್ ವರದಿ ಅಧಿಸೂಚನೆ ವಿರೋಧಿಸಿ ಪಶ್ಚಿಮಘಟ್ಟ ರೈತ ಸಹಕಾರ ವೇದಿಕೆಯ ನೇತೃತ್ವದಲ್ಲಿ ಕಾರಣಗಿರಿಯಿಂದ ಹೊಸನಗರದವರೆಗೆ ಸುಮಾರು 6 ಕಿ.ಮೀ. ಬೃಹತ್ ಪಾದಯಾತ್ರೆ ನಡೆಯಿತು. ಬಳಿಕ ನಡೆದ ಬಹಿರಂಗ ಸಭೆಯಲ್ಲಿ 3 ಸಾವಿರಕ್ಕೂ ಅಧಿಕ ರೈತರು ಹಾಗೂ ಸಾರ್ವಜನಿಕರು ಭಾಗವಹಿಸಿ ವರದಿ ಜಾರಿಗೆ ತೀವ್ರ ವಿರೋಧ ವ್ಯಕ್ತಪಡಿಸಿದರು.

“ಜನರ ಕೂಗು ದೆಹಲಿಗೆ ತಲುಪಬೇಕು” -ಬಿ.ವೈ. ರಾಘವೇಂದ್ರ
  ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ಕಸ್ತೂರಿರಂಗನ್ ವರದಿ ರಾಜ್ಯದ ರೈತರು ಮತ್ತು ಕೃಷಿ ಕಾರ್ಮಿಕರಲ್ಲಿ ಆತಂಕ ಮೂಡಿಸಿದ್ದು, ಹಳ್ಳಿ ಹಳ್ಳಿಗಳ ಸಂತ್ರಸ್ತರ ಧ್ವನಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಹಾಗೂ ಕೇಂದ್ರ ಸರ್ಕಾರಕ್ಕೆ ತಲುಪಬೇಕಾಗಿದೆ.  

  ಕಸ್ತೂರಿ ರಂಗನ್ ವರದಿ ಜಾರಿ ಕುರಿತು ಕೇಂದ್ರ ಸರ್ಕಾರ ಯಾವತ್ತೂ ಉತ್ಸುಕತೆ ತೋರಿಲ್ಲ. ಒಂದೊಮ್ಮೆ ವರದಿಯನ್ನು ಏಕಾಏಕಿಯಾಗಿ ಜಾರಿಗೆ ತರುವ ಮನಸು ಮಾಡುವುದಾದರೇ 7 ಅಧಿಸೂಚನೆ ಹೊರಡಿಸುತ್ತಿರಲಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈ ಕುರಿತು ಸದೃಢ ನಿರ್ಧಾರ ಕೈಗೊಂಡಿವೆ. ರಾಜ್ಯ ಸರ್ಕಾರ ವಿಶೇಷ ಅಧಿವೇಶನ ಕರೆಯುವ ನಿರ್ಧಾರ ಕೈಗೊಂಡಿರುವುದು ಸ್ವಾಗತಾರ್ಹವಾಗಿದೆ. ಕಸ್ತೂರಿ ರಂಗನ್ ವರದಿ ಜಾರಿಯಲ್ಲಿ ಸಾಕಷ್ಟು ಬದಲಾವಣೆ ಆಗಬೇಕಾಗಿದೆ. ವರದಿಯ ಸಾಧಕ-ಬಾಧಕಗಳ ಕುರಿತು ವ್ಯಾಪಕ ಚರ್ಚೆ ಆಗಬೇಕಾಗಿದೆ’ ಎಂದು ಹೇಳಿದರು.

  ಶಾಸಕ ಬೇಳೂರು ಗೋಪಾಲಕೃಷ್ಣ ಮಾತನಾಡಿ, ಈಗಿರುವ ಅರಣ್ಯ ಕಾಯ್ದೆಗಳೇ ಕಠಿಣವಾಗಿರುವ ಸಂದರ್ಭದಲ್ಲಿ ಕಸ್ತೂರಿರಂಗನ್ ವರದಿ ಜಾರಿಯಾದರೆ ಜನರ ಬದುಕಿಗೆ ಮರಣ ಶಾಸನವಾಗಲಿದೆ ಎಂದರು. ಅವರು, ಶಿವಮೊಗ್ಗ ಜಿಲ್ಲೆಯ 473 ಗ್ರಾಮಗಳು ವರದಿ ವ್ಯಾಪ್ತಿಗೆ ಬರುವ ಸಾಧ್ಯತೆ ಇದ್ದು, ಅದರ ವಿರುದ್ಧ ಸಂಘಟಿತ ಹೋರಾಟ ನಡೆಸಬೇಕೆಂದು ಕರೆ ನೀಡಿದರು.

ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಪರಿಸರ ಸೂಕ್ಷ್ಮ ವಲಯ ವ್ಯಾಪ್ತಿಗೆ ಸೇರುವ ಗ್ರಾಮಗಳ ಮರು ಸರ್ವೆ ನಡೆಸಬೇಕು ಎಂದು ಒತ್ತಾಯಿಸಿದರು.  ರೈತ ಸಹಕಾರ ವೇದಿಕೆ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡ ಮಾತನಾಡಿ, “ಸೇವ್ ಫಾರ್ಮ್” ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಆಕ್ಷೇಪಣೆ ಸಲ್ಲಿಸುವಂತೆ ರೈತರಿಗೆ ಮನವಿ ಮಾಡಿದರು.

  ಸಂಚಾಲಕ ವಾಟಗೋಡು ಸುರೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಭೆಯಲ್ಲಿ ಮಾಜಿ ಶಾಸಕ ಬಿ. ಸ್ವಾಮಿರಾವ್, ಆಯನೂರು ಮಂಜುನಾಥ್. ಕಲಗೋಡು ರತ್ನಾಕರ್, ಬಿ.ಆರ್. ಜಯಂತ್, ವಿದ್ಯಾಧರ ಗುರುಶಕ್ತಿ, ಮಾಸ್ತಿಕಟ್ಟಿ ಸುಬ್ರಹ್ಮಣ್ಯ, ಪೂರ್ಣೇಶ್ ಮಲೇಬೈಲು, ವಿನಯ ಕುಮಾರ್ ದುಮ್ಮ, ಚಂದ್ರಮೌಳಿ ಗೌಡ, ಸುಮಾ ಸುಬ್ರಹ್ಮಣ್ಯ, ಸತೀಶ್ ಎನ್. ಪ್ರಶಾಂತ್, ಎನ್.ಆರ್. ದೇವಾನಂದ್, ಪರಮೇಶ್ ಇದ್ದರು.

file 000000003f5c8208a0b120fec3430d9d3359044787338653219 ಕಸ್ತೂರಿರಂಗನ್ ವರದಿ ಜಾರಿ ವಿರುದ್ಧ ರೈತರ ಪಾದಯಾತ್ರೆ- ಬಹಿರಂಗ ಸಭೆ : ಸಂತ್ರಸ್ತರ ಧ್ವನಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ತಲುಪಲಿ : ಬಿ.ವೈ ರಾಘವೇಂದ್ರ

Leave a Reply

Your email address will not be published. Required fields are marked *