ಶಿವಮೊಗ್ಗ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರು ತನ್ನ ಮೂವರು ಮಕ್ಕಳೊಂದಿಗೆ ತುಂಗಾ ನದಿಗೆ ಹಾರಿದ ಘಟನೆ ಸೋಮವಾರ ರಾತ್ರಿ ನಡೆದಿದೆ. ಘಟನೆಯಲ್ಲಿ ತಾಯಿ ಹಾಗೂ ಒಂದು ಮಗು ಬದುಕುಳಿದಿದ್ದು, ಇಬ್ಬರು ಹೆಣ್ಣು ಮಕ್ಕಳಿಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯರು ತೀವ್ರ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಸೋಮವಾರ ರಾತ್ರಿ ಸುಮಾರು 7.15ರ ವೇಳೆಗೆ ಮಹಿಳೆ ತನ್ನ ಮೂವರು ಮಕ್ಕಳೊಂದಿಗೆ ತುಂಗಾ ನದಿಗೆ ಹಾರಿದ್ದಾಳೆ ಎನ್ನಲಾಗಿದೆ. ರೈಲ್ವೆ ಹಳಿಯ ಮೇಲಿನಿಂದ ಮೊದಲು ಇಬ್ಬರು ಮಕ್ಕಳನ್ನು ನದಿಗೆ ತಳ್ಳಿದ ಬಳಿಕ, 11 ತಿಂಗಳ ಗಂಡು ಮಗುವನ್ನು ಎತ್ತಿಕೊಂಡು ಮಹಿಳೆ ನದಿಗೆ ಜಿಗಿದಿದ್ದಾಳೆ ಎಂದು ತಿಳಿದುಬಂದಿದೆ.
ಈ ವೇಳೆ ಸ್ಥಳದಲ್ಲಿದ್ದ ಯುವಕರು ಕೂಡಲೇ ನದಿಗೆ ಧಾವಿಸಿ ಮಹಿಳೆ ಹಾಗೂ 11 ತಿಂಗಳ ಮಗುವನ್ನು ರಕ್ಷಿಸಿದ್ದಾರೆ. ಮಗುವನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತಾಯಿ ಹಾಗೂ ಮಗು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಆದರೆ 6 ವರ್ಷದ ಸಾನ್ವಿಕಾ ಹಾಗೂ 4 ವರ್ಷದ ತನ್ವಿಕಾ ಎಂಬ ಇಬ್ಬರು ಹೆಣ್ಣು ಮಕ್ಕಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದು, ಅವರಿಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯರು ಶೋಧ ಕಾರ್ಯ ಮುಂದುವರಿಸಿದ್ದಾರೆ.
ಚಿತ್ರದುರ್ಗದ ಹೊಸೂರು ಗ್ರಾಮದ ನಿವಾಸಿ ಭವಾನಿ ತನ್ನ ಕುಟುಂಬದೊಂದಿಗೆ ಸವಳಂಗದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು ಎನ್ನಲಾಗಿದೆ. ಪತಿ ದುಗ್ಗಪ್ಪ ಅವರೊಂದಿಗೆ ನಡೆದ ಸಣ್ಣಪುಟ್ಟ ಜಗಳದ ಹಿನ್ನೆಲೆಯಲ್ಲಿ ಮನೆಯಿಂದ ಹೊರಬಂದಿದ್ದ ಭವಾನಿ, ರೈಲ್ವೆ ಹಳಿಯ ಮೇಲಿನಿಂದ ಮಕ್ಕಳೊಂದಿಗೆ ನದಿಗೆ ಹಾರಿದ್ದಾಳೆ ಎಂದು ತಿಳಿದುಬಂದಿದೆ.
ಘಟನೆ ತಿಳಿದು ದುಗ್ಗಪ್ಪ ಸ್ಥಳಕ್ಕೆ ಆಗಮಿಸಿದ್ದು, ಮಕ್ಕಳನ್ನು ಪತ್ತೆಹಚ್ಚುವಂತೆ ಕಣ್ಣೀರಿಡುತ್ತಾ ಮನವಿ ಮಾಡಿದ್ದಾರೆ. ಅಗ್ನಿಶಾಮಕ ದಳ ಹಾಗೂ ಪೊಲೀಸ್ ತಂಡಗಳು ನಿರಂತರವಾಗಿ ಶೋಧ ಕಾರ್ಯ ನಡೆಸುತ್ತಿವೆ. ತುಂಗಾ ನದಿಯ ದಡದಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿದೆ.
ಘಟನೆ ವೇಳೆ ಸ್ಥಳದಲ್ಲಿದ್ದ ದಾದಾ ಪೀರ್ ಹಾಗೂ ನವೀನ್ ಅವರು ಯಾವುದೇ ಮುನ್ನೆಚ್ಚರಿಕೆಯನ್ನೂ ಲೆಕ್ಕಿಸದೆ ನದಿಗೆ ಧುಮುಕಿ ತಾಯಿ ಮತ್ತು ಮಗುವನ್ನು ರಕ್ಷಿಸಿದ್ದು, ಅವರ ಸಾಹಸಕ್ಕೆ ಸ್ಥಳೀಯರು ಹಾಗೂ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

















Leave a Reply