ನೇಪಾಳದ ಪೋಖರಾದಲ್ಲಿ ಜುಲೈ 29 ರಿಂದ 31ರವರೆಗೆ ನಡೆದ 2026ರ ಅಂತರಾಷ್ಟ್ರೀಯ ಏಷ್ಯನ್ ಕಬ್ಬಡಿ ಚಾಂಪಿಯನ್‌ಶಿಪ್‌ನಲ್ಲಿ ಭಾರತ ತಂಡ ಐತಿಹಾಸಿಕ ಸಾಧನೆ ಮಾಡಿ ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಂಡಿದೆ.
ಲೀಗ್ ಮಾದರಿಯಲ್ಲಿ ನಡೆದ ಈ ಪ್ರತಿಷ್ಠಿತ ಟೂರ್ನಿಯಲ್ಲಿ ಭಾರತ, ನೇಪಾಳ, ಶ್ರೀಲಂಕಾ, ಬಾಂಗ್ಲಾದೇಶ, ಭೂತಾನ್ ಹಾಗೂ ಅಫ್ಘಾನಿಸ್ತಾನ ಸೇರಿದಂತೆ ಹಲವು ರಾಷ್ಟ್ರಗಳ ತಂಡಗಳು ಭಾಗವಹಿಸಿದ್ದವು. ಭಾರತ ತಂಡವು ಲೀಗ್ ಹಂತದಲ್ಲೇ ಅಜೇಯ ಪ್ರದರ್ಶನ ನೀಡಿ ಫೈನಲ್‌ಗೆ ಪ್ರವೇಶಿಸಿತು.

ಫೈನಲ್ ಪಂದ್ಯದಲ್ಲಿ ಆತಿಥೇಯ ನೇಪಾಳ ತಂಡವನ್ನು 24–14 ಅಂಕಗಳ ಅಂತರದಿಂದ ಮಣಿಸಿದ ಭಾರತ ತಂಡ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ಸುಮಾರು 11 ವರ್ಷಗಳ ಬಳಿಕ ಭಾರತ ಈ ಪ್ರತಿಷ್ಠಿತ ಏಷ್ಯನ್ ಕಬ್ಬಡಿ ಚಾಂಪಿಯನ್‌ಶಿಪ್ ಗೆದ್ದಿರುವುದು ಭಾರತೀಯ ಕಬ್ಬಡಿ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲಾಗಿದೆ. ಭಾರತ ತಂಡದ ಈ ಸಾಧನೆಗೆ ಕಬ್ಬಡಿ ಅಸೋಸಿಯೇಷನ್‌ನ ಅಧ್ಯಕ್ಷರು, ಕಾರ್ಯದರ್ಶಿಗಳು, ಸದಸ್ಯರು, ಮಾಜಿ ಪದಾಧಿಕಾರಿಗಳು, ಕರ್ನಾಟಕ ರಾಜ್ಯ ಕಬ್ಬಡಿ ಅಸೋಸಿಯೇಷನ್ ಹಾಗೂ ದೆಹಲಿಯ ಕಬ್ಬಡಿ ಅಸೋಸಿಯೇಷನ್‌ನ ಅಧಿಕಾರಿಗಳು ಅಭಿನಂದನೆ ಸಲ್ಲಿಸಿ ಹರ್ಷ ವ್ಯಕ್ತಪಡಿಸಿದ್ದಾರೆ.
ಮುಂದಿನ ದಿನಗಳಲ್ಲಿ ಥೈಲ್ಯಾಂಡ್‌ನಲ್ಲಿ ನಡೆಯಲಿರುವ ಏಷ್ಯನ್ ಹಾಗೂ ಅಂತರರಾಷ್ಟ್ರೀಯ ಕಬ್ಬಡಿ ಚಾಂಪಿಯನ್‌ಶಿಪ್‌ನಲ್ಲಿ ಸುಮಾರು 15 ರಾಷ್ಟ್ರಗಳು ಭಾಗವಹಿಸಲಿದ್ದು, ಭಾರತ ತಂಡ ಮತ್ತೊಮ್ಮೆ ದೇಶದ ಕೀರ್ತಿಯನ್ನು ಹೆಚ್ಚಿಸುವ ವಿಶ್ವಾಸ ವ್ಯಕ್ತವಾಗಿದೆ. ಈ ತಂಡದಲ್ಲಿ ಕರ್ನಾಟಕದ ಆಟಗಾರರೂ ಸ್ಥಾನ ಪಡೆಯುವ ನಿರೀಕ್ಷೆಯಿದೆ.
ಈ ಐತಿಹಾಸಿಕ ವಿಜಯದಲ್ಲಿ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಮಹೇಂದ್ರ ಎಸ್. ಪೂಜಾರಿ (ಹಕ್ಕಾಡಿ) ಅವರು ಭಾರತ ತಂಡದ ಮುಖ್ಯ ತರಬೇತಿದಾರರಾಗಿ ಹಾಗೂ ಮುಖ್ಯ ಮೆಂಟರ್ ಮತ್ತು ಆಯ್ಕೆ ಸಮಿತಿ ಸದಸ್ಯರಾಗಿ ಮಹತ್ವದ ಪಾತ್ರ ವಹಿಸಿದ್ದಾರೆ. ಸುಮಾರು 20 ಸದಸ್ಯರನ್ನು ಒಳಗೊಂಡ ಭಾರತ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುವ ಮೂಲಕ ರಾಜ್ಯಕ್ಕೂ ಜಿಲ್ಲೆಗೂ ಹೆಮ್ಮೆ ತಂದಿದ್ದಾರೆ.
ಭಾರತ ತಂಡದ ಈ ಐತಿಹಾಸಿಕ ಸಾಧನೆಗೆ ದೇಶದಾದ್ಯಂತ ಕ್ರೀಡಾಭಿಮಾನಿಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳಿಂದ ಅಭಿನಂದನೆಗಳ ಮಹಾಪೂರ ಹರಿದುಬಂದಿದೆ.
ತಾಲೂಕಿನ ಹೆಮ್ಮೆ ಮಹೇಂದ್ರ ಎಸ್. ಪೂಜಾರಿ

ತಾಲೂಕಿನ ನಿಟ್ಟೂರಿನ ಸಮೀಪದ ಹಕ್ಕಾಡಿ ಮಹೇಂದ್ರ ಎಸ್. ಪೂಜಾರಿ ಅವರು ತಮ್ಮ ಶೈಕ್ಷಣಿಕ ಸಾಧನೆ ಮತ್ತು ಕ್ರೀಡಾ ಕ್ಷೇತ್ರದ ಸೇವೆಯ ಮೂಲಕ ತಾಲೂಕಿಗೆ ಹೆಮ್ಮೆ ತಂದಿದ್ದಾರೆ.
ಮಹೇಂದ್ರ ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಹೊಸನಗರ ತಾಲೂಕಿನಲ್ಲೇ ಪೂರ್ಣಗೊಳಿಸಿ, ನಂತರ ಕೊಡಚಾದ್ರಿ ಕಾಲೇಜಿನಲ್ಲಿ ಪದವಿ ಶಿಕ್ಷಣ ಮುಗಿಸಿದರು. ಬಳಿಕ ಕುವೆಂಪು ವಿಶ್ವವಿದ್ಯಾಲಯದಲ್ಲಿ ಬಿ.ಎಡ್. (B.Ed.) ಹಾಗೂ ಎಂ.ಎಡ್. (M.Ed.) ಪದವಿಗಳನ್ನು ಪಡೆದರು.
ಶೈಕ್ಷಣಿಕ ಕ್ಷೇತ್ರದಲ್ಲಿಯೂ ಮಹತ್ವದ ಸೇವೆ ಸಲ್ಲಿಸುತ್ತಿರುವ ಅವರು, ಪ್ರಸ್ತುತ ಬೆಂಗಳೂರು ಸಿಟಿ ವಿಶ್ವವಿದ್ಯಾಲಯದ ಆಯ್ಕೆ ಸಮಿತಿ (Selection Committee) ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಜೊತೆಗೆ ತಮಿಳುನಾಡಿನ ವಿಶ್ವವಿದ್ಯಾಲಯವೊಂದರಲ್ಲಿ ಪಿಎಚ್.ಡಿ. ಸಂಶೋಧನೆಯನ್ನು ಮುಂದುವರಿಸುತ್ತಿದ್ದಾರೆ.
ಕ್ರೀಡಾ ಕ್ಷೇತ್ರದಲ್ಲಿ ಆಟಗಾರ, ತರಬೇತಿದಾರ ಹಾಗೂ ಮಾರ್ಗದರ್ಶಕರಾಗಿ ಗುರುತಿಸಿಕೊಂಡಿರುವ ಮಹೇಂದ್ರ ಎಸ್. ಪೂಜಾರಿ ಅವರು ಭಾರತ ಕಬ್ಬಡಿ ತಂಡದ ಮುಖ್ಯ ತರಬೇತಿದಾರ, ಮುಖ್ಯ ಮೆಂಟರ್ ಆಗಿ ಸಲ್ಲಿಸುತ್ತಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಭಾರತ ತಂಡ ನೇಪಾಳದಲ್ಲಿ ನಡೆದ 2026ರ ಅಂತರಾಷ್ಟ್ರೀಯ ಏಷ್ಯನ್ ಕಬ್ಬಡಿ ಚಾಂಪಿಯನ್‌ಶಿಪ್‌ನಲ್ಲಿ ಐತಿಹಾಸಿಕ ಪ್ರಶಸ್ತಿ ಗೆದ್ದು ದೇಶದ ಕೀರ್ತಿಯನ್ನು ಹೆಚ್ಚಿಸಿದೆ.
ಶಿಕ್ಷಣ ಮತ್ತು ಕ್ರೀಡೆ ಎರಡೂ ಕ್ಷೇತ್ರಗಳಲ್ಲಿ ನಿರಂತರ ಸಾಧನೆ ಮಾಡುತ್ತಿರುವ ಮಹೇಂದ್ರ ಎಸ್. ಪೂಜಾರಿ ಅವರು ಹೊಸನಗರ ತಾಲೂಕು ಹಾಗೂ ರಾಜ್ಯದ ಯುವಜನತೆಗೆ ಆದರ್ಶ ವ್ಯಕ್ತಿಯಾಗಿದ್ದು, ಅವರ ಸಾಧನೆಗೆ ಎಲ್ಲೆಡೆಯಿಂದ ಅಭಿನಂದನೆಗಳು ವ್ಯಕ್ತವಾಗುತ್ತಿವೆ.
ಇವರ ಈ ಸಾಧನೆಗೆ ನಾಡಿ ಮೀಡಿಯಾ ಹೌಸ್ ವತಿಯಿಂದ ಅಭಿನಂದನೆಗಳು.. ನಿಮ್ಮ ಈ ಕ್ರೀಡಾ ಕ್ಷೇತ್ರದ ಸಾಧನೆ ಹೀಗೆ ಮುಂದುವರೆಯಲಿ ಎಂದು ಆಶಿಸುತ್ತೇವೆ.
#India Kabaddi Champion 2026#Asian Kabaddi Championship Nepal#Mahendra S Poojary #Pokhara #KabaddiChampionship















Leave a Reply