ನಾವು ಕಲಿತ ಎಲ್ಲಾ ವಿಷಯಗಳಂತೆ ಹಿಂದಿ ವಿಷಯಕ್ಕೂ ಸಮಾನ ಮಹತ್ವ ನೀಡಿ :ವಿದ್ಯಾರ್ಥಿಗಳ ಆಗ್ರಹ
ಹೊಸನಗರ: ರಾಜ್ಯದ ಪ್ರೌಢಶಾಲಾ ವಿದ್ಯಾರ್ಥಿಗಳ ತೃತೀಯ ಭಾಷೆ (ಹಿಂದಿ) ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಗ್ರೇಡಿಂಗ್ ಪದ್ಧತಿ ಅನ್ವಯಿಸುವ ಬದಲು ಅಂಕಗಳನ್ನು ನೀಡಬೇಕು ಎಂದು ವಿದ್ಯಾರ್ಥಿಗಳು ಮನವಿ ಸಲ್ಲಿಸಿದ್ದಾರೆ.
ಮಾರ್ಚ್ 31ರಂದು ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಹಿನ್ನೆಲೆ, ಹೊಸನಗರದ ಸರ್ಕಾರಿ ಜೂನಿಯರ್ ಕಾಲೇಜು ವಿಭಾಗದ ಪ್ರೌಢಶಾಲಾ ವಿದ್ಯಾರ್ಥಿಗಳು ತಹಶೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿ, ಸರ್ಕಾರವು ಜಾರಿಗೆ ತಂದಿರುವ ಗ್ರೇಡಿಂಗ್ ವ್ಯವಸ್ಥೆಯನ್ನು ರದ್ದುಪಡಿಸಿ, ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ನೇರವಾಗಿ ಫಲಿತಾಂಶದಲ್ಲಿ ತೋರಿಸುವಂತೆ ಒತ್ತಾಯಿಸಿದರು.

ಮನವಿ ಪತ್ರದಲ್ಲಿ ವಿದ್ಯಾರ್ಥಿಗಳು, ತೃತೀಯ ಭಾಷೆಯಾದ ಹಿಂದಿ ವಿಷಯಕ್ಕೆ ಗ್ರೇಡಿಂಗ್ ಪದ್ಧತಿ ಅನ್ವಯಿಸುವುದರಿಂದ ವಿದ್ಯಾರ್ಥಿಗಳ ಒಟ್ಟು ಫಲಿತಾಂಶದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ ಎಂದು ತಿಳಿಸಿದ್ದಾರೆ. ಭಾಷಾ ವಿಷಯಗಳು ವಿದ್ಯಾರ್ಥಿಗಳ ಜ್ಞಾನವರ್ಧನೆಗೆ ಮಾತ್ರವಲ್ಲದೆ, ವಿವಿಧ ಸಂಸ್ಕೃತಿಗಳ ಅರಿವು ಹಾಗೂ ಸಂವಹನ ಕೌಶಲ್ಯಗಳ ಅಭಿವೃದ್ಧಿಗೂ ಸಹಕಾರಿ ಆಗುತ್ತವೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಹೀಗಾಗಿ, ನಾವು ಕಲಿತ ಎಲ್ಲಾ ವಿಷಯಗಳಂತೆ ಹಿಂದಿ ವಿಷಯಕ್ಕೂ ಸಮಾನ ಮಹತ್ವ ನೀಡಿ, ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಫಲಿತಾಂಶ ನೀಡಬೇಕು ಎಂದು ವಿದ್ಯಾರ್ಥಿಗಳು ಮನವಿಯಲ್ಲಿ ತಿಳಿಸಿದ್ದಾರೆ.

















Leave a Reply