
ಹೊಸನಗರ: ಯಾವುದೇ ಸಂಘ ಸಂಸ್ಥೆಗಳು ಯಶಸ್ವಿಯಾಗಿ ಬೆಳೆಯಬೇಕಾದರೆ ಅದರ ಸದಸ್ಯರ ಕ್ರಿಯಾಶೀಲತೆ ಅತ್ಯಂತ ಮುಖ್ಯವಾಗಿದೆ. ಸದಸ್ಯರಲ್ಲಿ ಚಟುವಟಿಕೆ ಮತ್ತು ಸೇವಾಭಾವನೆ ಇಲ್ಲದಿದ್ದರೆ ಸಂಘ ಸಂಸ್ಥೆಗಳನ್ನು ಬೆಳೆಸುವುದು ಅಸಾಧ್ಯ ಎಂದು ಬಂಟರ ಯಾನೆ ನಾಡವರ ಸಂಘದ ತಾಲೂಕು ಅಧ್ಯಕ್ಷ ದಿವಾಕರ ಶೆಟ್ಟಿ ಹೇಳಿದರು.
ಪಟ್ಟಣದ ಗಣಪತಿ ದೇವಸ್ಥಾನದ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಂಘದ ಧ್ಯೇಯೋದ್ದೇಶಗಳು ಸಮುದಾಯದ ಅಭಿವೃದ್ಧಿಗೆ ಪೂರಕವಾಗಿರುತ್ತವೆ. ಸದಸ್ಯರು ಹಾಗೂ ಪದಾಧಿಕಾರಿಗಳು ಕಾರ್ಯೋನ್ಮುಖರಾಗಿದಾಗ ಮಾತ್ರ ಸಂಘದ ಗುರಿ ತಲುಪಲು ಸಾಧ್ಯ. ವಿಶೇಷವಾಗಿ ಯುವಪೀಳಿಗೆ ಸಂಘದ ಚಟುವಟಿಕೆಗಳಲ್ಲಿ ಹೆಚ್ಚಿನ ಆಸಕ್ತಿ ವಹಿಸಬೇಕು ಎಂದು ಅವರು ಕರೆ ನೀಡಿದರು.

ಸಂಘದ ಉಪಾಧ್ಯಕ್ಷ ನಗರ ಚಂದ್ರಶೇಖರ ಶೆಟ್ಟಿ ಮಾತನಾಡಿ, ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗೌರವಿಸುವ ಮೂಲಕ ಸಂಘವು ಅವರಿಗೆ ಇನ್ನಷ್ಟು ಸಾಧನೆ ಮಾಡಲು ಪ್ರೇರಣೆ ನೀಡುತ್ತಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಸದಸ್ಯರಲ್ಲಿ ಸಂಘ ಸಂಸ್ಥೆಗಳನ್ನು ಬೆಳೆಸಿಕೊಂಡು ಹೋಗುವ ಮನೋಭಾವ ಹಾಗೂ ಪರಿಜ್ಞಾನ ಕಡಿಮೆಯಾಗುತ್ತಿರುವುದು ವಿಷಾದನೀಯ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಂಪೆಕಟ್ಟೆ ಚಂದ್ರಶೇಖರ ಶೆಟ್ಟಿ, ತಾಲೂಕು ಕೇಂದ್ರದಲ್ಲಿ ಸಂಘದ ಸ್ವಂತ ಜಾಗ ಮತ್ತು ಕಟ್ಟಡ ನಿರ್ಮಾಣ ಅಗತ್ಯವಿದೆ. ಸಂಘ ಸ್ಥಾಪನೆಯಾಗಿ ಸುಮಾರು ಇಪ್ಪತ್ತು ವರ್ಷ ಕಳೆದಿದ್ದರೂ ಸರ್ಕಾರ ಹಾಗೂ ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಜೊತೆಗೆ, ಸಂಘದಿಂದ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳನ್ನು ಗುರುತಿಸಿ ನೆರವು ನೀಡಲಾಗುತ್ತಿದ್ದು, ಸದಸ್ಯರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಮೋಹನ ಶೆಟ್ಟಿ ಮಾತನಾಡಿ, ಸಂಘದ ಮೂಲಕ ಜೀವನದಲ್ಲಿ ಯಶಸ್ಸು ಕಂಡವರು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ನೆರವಿಗೆ ಹಾಗೂ ಸಂಘವನ್ನು ಮತ್ತಷ್ಟು ಬಲಪಡಿಸಲು ಮುಂದಾಗಬೇಕು ಎಂದರು.
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕರುಣಾಕರ ಶೆಟ್ಟಿ ಮಾತನಾಡಿ, ಸಂಘದ ಉತ್ತಮ ಕಾರ್ಯಕ್ರಮಗಳಿಗೆ ಸಮಾಜದ ಸದಸ್ಯರು ಗೈರುಹಾಜರಾಗುವುದು ಬೇಸರದ ಸಂಗತಿ. ಆದರೆ ಅನಗತ್ಯ ಸಂದರ್ಭಗಳಲ್ಲಿ ಗುಂಪು ಸೇರುವುದು ದುರದೃಷ್ಟಕರ ಬೆಳವಣಿಗೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ನಿವೃತ್ತ ಸಿಆರ್‌ಪಿಎಫ್ ಯೋಧ ಮೋಹನ ಶೆಟ್ಟಿ ಹಾಗೂ ನಿವೃತ್ತ ಸರ್ಕಾರಿ ನೌಕರ ಕಿಶೋರಕುಮಾರ್ ಅವರನ್ನು ಸನ್ಮಾನಿಸಲಾಯಿತು. ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ವೇದಿಕೆಯಲ್ಲಿ ದೇವಗಂಗೆ ಚಂದ್ರಶೆಟ್ಟಿ, ನಿವೃತ್ತ ಶಿಕ್ಷಕ ರಾಮಣ್ಣ ಶೆಟ್ಟಿ, ಉದ್ಯಮಿ ವಿಜಯ ಶೆಟ್ಟಿ, ಶರತ್ ಶೆಟ್ಟಿ, ಭಾಸ್ಕರ ಶೆಟ್ಟಿ, ನವೀನ ಶೆಟ್ಟಿ, ಶಶಿಕಲ ಶೆಟ್ಟಿ, ಕೋಡೂರು ಸುರೇಶ್ ಶೆಟ್ಟಿ, ನಾಗರಕೋಡಿಗೆ ಸುರೇಶ್ ಶೆಟ್ಟಿ, ನಂದಿನಿ ರಮೇಶ್ ಶೆಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಮಾಲಾಶ್ರಿ ಕಾರ್ಯಕ್ರಮ ನಿರೂಪಿಸಿದರು.

















Leave a Reply