ಹೊಸನಗರ: ಮಲೆನಾಡಿನಲ್ಲಿ ಈ ಬಾರಿ ಮಳೆ ವಿಳಂಬವಾಗಿರುವ ಹಿನ್ನೆಲೆಯಲ್ಲಿ ಹೊಸನಗರ ತಾಲ್ಲೂಕಿನ 30 ಗ್ರಾಮ ಪಂಚಾಯಿತಿಗಳಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಅನ್ನಪೂರ್ಣ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಹೊಸನಗರ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಈ ವರ್ಷ ಮಳೆಯ ಕೊರತೆಯಿಂದ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಇರುವುದರಿಂದ ಎಲ್ಲ ಗ್ರಾಮ ಪಂಚಾಯಿತಿ ಪಿಡಿಒಗಳು ಮುಂಚಿತವಾಗಿ ಯೋಜನೆ ರೂಪಿಸಿ ಸಮಸ್ಯೆ ಉಂಟಾಗದಂತೆ ಕ್ರಮವಹಿಸಬೇಕು ಎಂದು ತಿಳಿಸಿದರು.
ರಾಜ್ಯದಲ್ಲಿ ಬರದ ಛಾಯೆ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಜಿಲ್ಲಾಧಿಕಾರಿಗಳಿಂದ ವರದಿ ಕೋರಿದ್ದಾರೆ. ಗ್ರಾಮ ಮಟ್ಟದಲ್ಲಿ ಯಾವುದೇ ಸಮಸ್ಯೆ ಕಂಡುಬಂದರೂ ತಕ್ಷಣ ಟಾಸ್ಕ್ ಫೋರ್ಸ್ ಸಮಿತಿಯ ಗಮನಕ್ಕೆ ತರಬೇಕು. ಕೊನೆಯ ಕ್ಷಣದಲ್ಲಿ ಮಾಹಿತಿ ನೀಡಿದರೆ ಸಾರ್ವಜನಿಕರಿಗೆ ತೊಂದರೆ ಉಂಟಾಗುವ ಸಾಧ್ಯತೆ ಇದ್ದು, ಅದರ ಹೊಣೆ ಗ್ರಾಮ ಪಂಚಾಯಿತಿ ಅಧಿಕಾರಿಗಳದ್ದೇ ಆಗಲಿದೆ ಎಂದು ಎಚ್ಚರಿಸಿದರು.
ಗ್ರಾಮ ಪಂಚಾಯಿತಿ ಪಿಡಿಒಗಳು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಸ್ಥಳೀಯ ಮಟ್ಟದಲ್ಲೇ ವಾಸವಿದ್ದು ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತ ಸ್ಪಂದನೆ ನೀಡಬೇಕು. ಅತಿವೃಷ್ಟಿ, ಮನೆಗಳ ಮೇಲೆ ಮರ ಬಿದ್ದು ಹಾನಿಯಾದಂತಹ ಘಟನೆಗಳು ಸಂಭವಿಸಿದರೆ 24 ಗಂಟೆಯೊಳಗೆ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸುವಂತೆ ಸೂಚಿಸಿದರು.
ತಾಲ್ಲೂಕಿನಲ್ಲಿ ಶಾಲೆ ಬಿಟ್ಟಿರುವ ಮಕ್ಕಳ ಮನೆಗಳಿಗೆ ಭೇಟಿ ನೀಡಿ ಅವರನ್ನು ಮತ್ತೆ ಶಾಲೆಗೆ ಸೇರಿಸಲು ಪ್ರೇರೇಪಿಸುವಂತೆ ಪಿಡಿಒಗಳಿಗೆ ನಿರ್ದೇಶನ ನೀಡಿದರು.
ಇದೇ ವೇಳೆ, ಹೊಸನಗರ ತಾಲ್ಲೂಕಿನ 30 ಗ್ರಾಮ ಪಂಚಾಯಿತಿಗಳಲ್ಲಿರುವ ಮಳೆಮಾಪನ ಕೇಂದ್ರಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿವೆಯೇ ಎಂಬುದನ್ನು ಪರಿಶೀಲಿಸಿ, ದೋಷ ಕಂಡುಬಂದಲ್ಲಿ ತಕ್ಷಣ ದುರಸ್ತಿ ಮಾಡಿಸಿಕೊಳ್ಳುವಂತೆ ಸೂಚಿಸಿದರು.
ಸಭೆಯಲ್ಲಿ ತಹಶೀಲ್ದಾರ್ ಭರತ್ರಾಜ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನರೇಂದ್ರಕುಮಾರ್, ಪವನ್ಕುಮಾರ್, ಮಂಜುನಾಥ್ ಸೇರಿದಂತೆ ತಾಲ್ಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು, ಪಿಡಿಒಗಳು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಉಪಸ್ಥಿತರಿದ್ದರು.













Leave a Reply