ವರ್ತಕರ ಸಂಘದ ಮನವಿ ಮೇರೆಗೆ ವಿಶೇಷ ಕಾರ್ಯಕ್ರಮ; ಡಿಜಿಟಲ್ ವ್ಯವಹಾರಕ್ಕೂ ಬ್ಯಾಂಕ್ ಪ್ರೋತ್ಸಾಹ

ಹೊಸನಗರ: ಹೊಸನಗರ ತಾಲೂಕು ವರ್ತಕರ ಸಂಘದ ಮನವಿ ಮೇರೆಗೆ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ಬಿಐ) ಹೊಸನಗರ ಶಾಖೆಯು ಶನಿವಾರ ವಿಶೇಷವಾಗಿ ‘ಕಾಯಿನ್ಸ್ ಮೇಳ’ ಆಯೋಜಿಸಿ ವರ್ತಕರು, ಗ್ರಾಹಕರು ಹಾಗೂ ಸಾರ್ವಜನಿಕರಿಗೆ ಚಿಲ್ಲರೆ ನಾಣ್ಯಗಳನ್ನು ವಿತರಿಸಿತು.
ಮಾರುಕಟ್ಟೆಯಲ್ಲಿ ಎದುರಾಗಿರುವ ಚಿಲ್ಲರೆ ಅಭಾವವನ್ನು ಗಮನದಲ್ಲಿಟ್ಟುಕೊಂಡು, ತನ್ನ ನಿತ್ಯದ ಬ್ಯಾಂಕಿಂಗ್ ಕಾರ್ಯಚಟುವಟಿಕೆಗಳ ಜೊತೆಗೆ ಎಸ್ಬಿಐ ಹೊಸನಗರ ಶಾಖೆಯು ಕರೆನ್ಸಿ ಚೆಸ್ಟ್ ಶಾಖೆಯಿಂದ ಹೆಚ್ಚುವರಿಯಾಗಿ ಸಣ್ಣ ಮೊತ್ತದ ನಾಣ್ಯಗಳನ್ನು ತರಿಸಿಕೊಂಡು ವಿತರಣೆ ಮಾಡಿತು. ಈ ಕ್ರಮಕ್ಕೆ ವರ್ತಕರು ಹಾಗೂ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಖಾ ವ್ಯವಸ್ಥಾಪಕ ಮಾಧವ್, ಸಾರ್ವಜನಿಕರು ತಮ್ಮ ಬಳಿ ಇರುವ ಚಿಲ್ಲರೆ ನಾಣ್ಯಗಳನ್ನು ವ್ಯವಹಾರಗಳಲ್ಲಿ ಬಳಕೆ ಮಾಡಿಕೊಳ್ಳುವಂತೆ ಹಾಗೂ ಬ್ಯಾಂಕಿನ ಡಿಜಿಟಲ್ ವೇದಿಕೆಯಾದ ಎಸ್ಬಿಐ ಯೋನೋ ಮೂಲಕ ಹಣಕಾಸು ವ್ಯವಹಾರಗಳನ್ನು ನಡೆಸುವಂತೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ತಾಲೂಕು ವರ್ತಕರ ಸಂಘದ ಅಧ್ಯಕ್ಷ ಪೂರ್ಣೇಶ್ ಪ್ರಿಯಾಂಕ, ಸಂಘದ ಪದಾಧಿಕಾರಿಗಳು ಹಾಗೂ ಬ್ಯಾಂಕಿನ ಅಧಿಕಾರಿಗಳಾದ ಸರ್ವೇಶ್, ಆರ್ಯ, ಗಣೇಶ್ ಮಧುಕರ್, ಪ್ರತೀಕ್ಷಾ, ಮಧುಕರ್ ಮತ್ತು ವಿಜಯಲಕ್ಷ್ಮೀ ಉಪಸ್ಥಿತರಿದ್ದರು.

















Leave a Reply