ಶಿವಮೊಗ್ಗ: ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಂಜುನಾಥ್ (56) ಅವರು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.
ಮೂಲತಃ ತುಮಕೂರು ಜಿಲ್ಲೆಯ ಹಾರೋನಹಳ್ಳಿ ಗ್ರಾಮದವರಾದ ಮಂಜುನಾಥ್ ಅವರು ಹಲವು ವರ್ಷಗಳಿಂದ ಶಿವಮೊಗ್ಗದ ವಿನೋಬನಗರದಲ್ಲಿ ಕುಟುಂಬ ಸಮೇತ ನೆಲೆಸಿದ್ದರು. 1992ರಲ್ಲಿ ಪೊಲೀಸ್ ಕಾನ್ಸ್ಟೇಬಲ್ ಆಗಿ ಪೊಲೀಸ್ ಇಲಾಖೆಗೆ ಸೇರ್ಪಡೆಯಾದ ಅವರು, ಹೆಡ್ ಕಾನ್ಸ್ಟೇಬಲ್ ಹಾಗೂ ಸಹಾಯಕ ಪೊಲೀಸ್ ಉಪನಿರೀಕ್ಷಕರಾಗಿ ಸೇವೆ ಸಲ್ಲಿಸಿ ನಂತರ ಪದೋನ್ನತಿ ಹೊಂದಿ ಪೊಲೀಸ್ ಉಪನಿರೀಕ್ಷಕರಾದರು. ಕಳೆದ ನಾಲ್ಕು ವರ್ಷಗಳಿಂದ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಕಿಡ್ನಿ ಸಂಬಂಧಿತ ಅನಾರೋಗ್ಯದಿಂದ ಅವರು ಕೆಲಕಾಲದಿಂದ ಚಿಕಿತ್ಸೆ ಪಡೆಯುತ್ತಿದ್ದರು. ಶಿವಮೊಗ್ಗ ಹಾಗೂ ಮಣಿಪಾಲ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮುಂದುವರಿದಿತ್ತು. ನಿಯಮಿತ ಆರೋಗ್ಯ ತಪಾಸಣೆಗಾಗಿ ಮಣಿಪಾಲ ಆಸ್ಪತ್ರೆಗೆ ತೆರಳುತ್ತಿದ್ದ ವೇಳೆ ಮಾರ್ಗಮಧ್ಯೆ ಏಕಾಏಕಿ ಅಸ್ವಸ್ಥಗೊಂಡು ಕುಸಿದು ಬಿದ್ದರು.
ತಕ್ಷಣ ಅವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ವೈದ್ಯರು ಅವರು ಮೃತಪಟ್ಟಿರುವುದಾಗಿ ದೃಢಪಡಿಸಿದರು. ಪ್ರಾಥಮಿಕ ಮಾಹಿತಿಯಂತೆ ಹೃದಯಾಘಾತವೇ ಸಾವಿಗೆ ಕಾರಣ ಎಂದು ತಿಳಿದುಬಂದಿದೆ.
ಮಂಜುನಾಥ್ ಅವರಿಗೆ ಪತ್ನಿ ಇದ್ದು, ಮಕ್ಕಳಿಲ್ಲ. ಕರ್ತವ್ಯನಿಷ್ಠೆ, ಸರಳ ವ್ಯಕ್ತಿತ್ವ ಹಾಗೂ ಸಹೋದ್ಯೋಗಿಗಳೊಂದಿಗೆ ಉತ್ತಮ ಬಾಂಧವ್ಯದಿಂದ ಅವರು ಪೊಲೀಸ್ ಇಲಾಖೆಯಲ್ಲಿ ಉತ್ತಮ ಹೆಸರು ಗಳಿಸಿದ್ದರು. ಅವರ ನಿಧನಕ್ಕೆ ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆ ತೀವ್ರ ಸಂತಾಪ ವ್ಯಕ್ತಪಡಿಸಿದೆ.















Leave a Reply