ಹೊಸನಗರ: ಹಲವು ಮೂಲಭೂತ ಸಮಸ್ಯೆಗಳಿಂದ ಬಳಲುತ್ತಿರುವ ಹೊಸನಗರ ಪ್ರದೇಶ ಸಮಗ್ರ ಅಭಿವೃದ್ಧಿ ಕಾಣಬೇಕಾದರೆ ವಿಧಾನಸಭಾ ಕ್ಷೇತ್ರ ಮರುಸ್ಥಾಪನೆ ಅತ್ಯಾವಶ್ಯಕ ಎಂದು ಜನಪ್ರತಿನಿಧಿಗಳು, ಮಠಾಧೀಶರು ಹಾಗೂ ಧರ್ಮಗುರುಗಳು ಒಕ್ಕೊರಲ ಧ್ವನಿಯಲ್ಲಿ ಒತ್ತಾಯಿಸಿದರು.
ತಾಲೂಕಿನ ನಗರ ಹೋಬಳಿಯ ಚಿಕ್ಕಪೇಟೆಯ ಶ್ರೀ ಮಹಾಗಣಪತಿ ಸನ್ನಿಧಿಯಲ್ಲಿ ಸಂಕಷ್ಟ ಹರ ಚತುರ್ಥಿ ಪ್ರಯುಕ್ತ ವಿಶೇಷ ಪೂಜೆ ಸಲ್ಲಿಸಿದ ಬಳಿಕ, ಹೊಸನಗರ ವಿಧಾನಸಭಾ ಕ್ಷೇತ್ರ ಮರುಸ್ಥಾಪನೆಗಾಗಿ ಪಾದಯಾತ್ರೆಗೆ ಚಾಲನೆ ನೀಡಲಾಯಿತು. ಈ ವೇಳೆ ಸಾವಿರಾರು ಜನರು ಭಾಗವಹಿಸಿ ಹೋರಾಟಕ್ಕೆ ಬಲ ತುಂಬಿದರು.
ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಹೊಸನಗರ ಕ್ಷೇತ್ರ ಕಳೆದುಹೋಗುವ ಸಂದರ್ಭದಲ್ಲಿಯೇ ವಿರೋಧ ವ್ಯಕ್ತಪಡಿಸಿದ್ದೇವೆ. ಆದರೆ ಅದು ಫಲಕಾರಿಯಾಗಲಿಲ್ಲ. ಇದೀಗ ಜನರಿಂದಲೇ ಹೋರಾಟ ಶುರುವಾಗಿದೆ. ಈ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದರು. ಶಾಸಕ ಬೇಳೂರು ಗೋಪಾಲಕೃಷ್ಣ ಮಾತನಾಡಿ, ಹೊಸನಗರ ನಾಡು ರಾಜ್ಯಕ್ಕೆ ಬಹಳ ಕೊಡುಗೆ ನೀಡಿದೆ. ಆದರೆ ಸಮರ್ಪಕ ನ್ಯಾಯ ದೊರಕಿಲ್ಲ. ಕ್ಷೇತ್ರ ಮರುಸ್ಥಾಪನೆಗಾಗಿ ನಡೆಯುತ್ತಿರುವ ಹೋರಾಟಕ್ಕೆ ತನು-ಮನ-ಧನ ಸಮರ್ಪಿಸುತ್ತೇನೆ ಎಂದು ಭರವಸೆ ನೀಡಿದರು.
ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡ, ಕಲಗೋಡು ರತ್ನಾಕರ್ ಸೇರಿದಂತೆ ಹಲವು ಗಣ್ಯರು ಹೋರಾಟಕ್ಕೆ ಬೆಂಬಲ ಸೂಚಿಸಿದರು.
ಮೂಲೆಗದ್ದೆ ಶ್ರೀಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಪಾದಯಾತ್ರೆಗೆ ಜನರ ಭಾರೀ ಸ್ಪಂದನೆ ಕಂಡುಬಂದಿದ್ದು, ಪ್ರದೇಶದ ನೋವು ಮತ್ತು ಸಮಸ್ಯೆಗಳ ತೀವ್ರತೆ ತಿಳಿಯುತ್ತದೆ. ಧರ್ಮಾತೀತ, ಪಕ್ಷಾತೀತ, ಜಾತ್ಯಾತೀತವಾಗಿ ಜನ ಒಗ್ಗಟ್ಟಾಗಿ ಹೋರಾಟ ನಡೆಸುತ್ತಿರುವುದು ಭವಿಷ್ಯಕ್ಕೆ ಉತ್ತಮ ಬೆಳವಣಿಗೆ ಎಂದು ಹೇಳಿದರು.
96 ವರ್ಷದ ಹಿರಿಯ ರಾಜಕಾರಣಿಯ ಪಾದಯಾತ್ರೆ ವಿಶೇಷ
ಮಾಜಿ ಶಾಸಕ, 96 ವರ್ಷದ ಹಿರಿಯ ರಾಜಕಾರಣಿ ಬಿ. ಸ್ವಾಮಿರಾವ್ ಪಾದಯಾತ್ರೆಯ ಮೊದಲ ದಿನವೇ 18 ಕಿಮೀ ದೂರ ನಡೆದು ಎಲ್ಲರ ಗಮನ ಸೆಳೆದರು. ವಾಹನದಲ್ಲಿ ತೆರಳುವಂತೆ ಮನವಿ ಮಾಡಿದರೂ ನಿರಾಕರಿಸಿ, ಪಾದಯಾತ್ರೆ ನನ್ನ ಸಂಕಲ್ಪ ಎಂದು ಹೇಳಿ ನಡೆದು ಬಂದರು.

ಎತ್ತಿನಗಾಡಿ ಮೂಲಕ ಆಗಮನ ಗಮನಸೆಳೆದ ಗ್ರಾಮಸ್ಥರು
ಕರಿಮನೆ ಗ್ರಾಪಂ ವ್ಯಾಪ್ತಿಯ ನೂಲಿಗ್ಗೇರಿಯಿಂದ ನೂರಾರು ಗ್ರಾಮಸ್ಥರು ಎತ್ತಿನಗಾಡಿಗಳೊಂದಿಗೆ ಪಾದಯಾತ್ರೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಮಾರ್ಗ ಮಧ್ಯೆ ಪಾದಚಾರಿಗಳಿಗೆ ಬಾಳೆಹಣ್ಣು, ಶರಬತ್ತು, ಐಸ್‌ಕ್ರೀಂ, ನೇರಳೆ ಹಣ್ಣು ಸೇರಿದಂತೆ ವಿವಿಧ ತಿನಿಸುಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ನಿಟ್ಟೂರು ಗರ್ತಿಕೆರೆ ಶ್ರೀಗಳು, ಶಿಮುಲ್ ಅಧ್ಯಕ್ಷ ವಿದ್ಯಾಧರ ಗುರುಶಕ್ತಿ, ಮಾಸ್ತಿಕಟ್ಟೆ ಸುಬ್ರಹ್ಮಣ್ಯ, ಹಾಲಗದ್ದೆ ಉಮೇಶ್, ಎನ್.ಆರ್. ದೇವಾನಂದ್, ಕೆ.ವಿ. ಕೃಷ್ಣಮೂರ್ತಿ,ರಮಾಕಾಂತ್,ಚಿದಂಬರ,ಮಹೇಶ್ ದೇವರಸಲಿಕೆ, ಆಲುವಳ್ಳಿ ವಿರೇಶ್, ರಮೇಶ್ ಹಲಸಿನಹಳ್ಳಿ, ಕರುಣಾಕರ ಶೆಟ್ಟಿ, ಸತೀಶ್, ಅಂಬ್ರಯ್ಯಮಠ, ಚಕ್ರವಾಕ ಸುಬ್ರಹಣ್ಯ, ಸುಧೀಂದ್ರ ಪಂಡಿತ್, ನಾರಾಯಣ ಕಾಮತ್,ಆರ್.ಎ.ಚಾಬುಸಾಬ್,ವರ್ತೇಶ್,ನೇಮಿರಾಜ್, ಸೇರಿದಂತೆ ಮುಸ್ಲಿಂ ಹಾಗೂ ಕ್ರೈಸ್ತ ಧರ್ಮಗುರುಗಳು, ವಿವಿಧ ಪಕ್ಷಗಳ ಮುಖಂಡರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಮತ್ತು ನಗರ ಹೋಬಳಿಯ 9 ಗ್ರಾಪಂಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಪತ್ರಕರ್ತ ರವಿ ಬಿದನೂರು ನಿರ್ವಹಿಸಿದರು.
















Leave a Reply