300 ರೂಪಾಯಿ ಕಮಿಷನ್ ಆಸೆಗೆ 150 ಜನರನ್ನು ಸ್ಕೀಮ್‌ಗೆ ಸೇರಿಸಿದ ಯುವಕ!
ಹೊಸನಗರ: ಗೃಹೋಪಯೋಗಿ ವಸ್ತುಗಳು ಹಾಗೂ ನಗದು ಬಹುಮಾನಗಳ ಆಮಿಷವೊಡ್ಡಿ ಸಾರ್ವಜನಿಕರಿಂದ ಕೋಟ್ಯಾಂತರ ರೂಪಾಯಿ ಸಂಗ್ರಹಿಸಿ ವಂಚಿಸಿರುವ ಬೃಹತ್ ಜಾಲವೊಂದು ಹೊಸನಗರದಲ್ಲಿ ಬೆಳಕಿಗೆ ಬಂದಿದೆ. ಉಡುಪಿ ಮೂಲದ ‘ಆಯಾನ್ ಗ್ರೂಪ್’ ಸಂಸ್ಥೆಯ ಮಾಲೀಕರು ಸುಮಾರು 3 ಕೋಟಿಗೂ ಅಧಿಕ ಹಣವನ್ನು ವಂಚಿಸಿರುವ ಆರೋಪ ಎದುರಿಸುತ್ತಿದ್ದಾರೆ.
ಈ ಕುರಿತು ಹೊಸನಗರ ತಾಲೂಕಿನ ಹಳೇ ಸಾಗರ ರಸ್ತೆಯ ದ್ಯಾವರ್ಸ ನಿವಾಸಿ ನಿಹಾಲ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಉಡುಪಿ ಜಿಲ್ಲೆಯ ಉಚ್ಚಿಲ ಬಾಡದ ಅಬ್ದುಲ್ ರಜಾಕ್ ಹಾಗೂ ಶೇಕ್ ಮಹಮ್ಮದ್ ಫಜಲ್ ವಿರುದ್ಧ ವಂಚನೆ ಆರೋಪ ಕೇಳಿಬಂದಿದೆ.
ವಂಚನೆಯ ತಂತ್ರ ಹೇಗೆ ?
ಆರೋಪಿಗಳು ‘ಆಯಾನ್ ಗ್ರೂಪ್’ ಹೆಸರಿನಲ್ಲಿ 13, 16 ಮತ್ತು 21 ತಿಂಗಳ ಯೋಜನೆಗಳನ್ನು ಪರಿಚಯಿಸಿ, ಪ್ರತಿ ತಿಂಗಳು 1,000 ರೂ. ಕಂತು ಪಾವತಿಸಿದರೆ ಮಧ್ಯಂತರ ಹಾಗೂ ಕೊನೆಯಲ್ಲಿ ಆಕರ್ಷಕ ಬಹುಮಾನ ನೀಡುವುದಾಗಿ ನಂಬಿಸಿದ್ದರು. ಜೊತೆಗೆ ಹೊಸ ಗ್ರಾಹಕರನ್ನು ಸೇರಿಸುವ ಏಜೆಂಟರಿಗೆ ಪ್ರತಿ ಕಾರ್ಡ್‌ಗೆ 300 ರೂ. ಕಮಿಷನ್ ನೀಡುವ ಆಮಿಷವನ್ನೂ ಒಡ್ಡಿದ್ದರು.
300 ರೂಪಾಯಿ ಕಮಿಷನ್ ಆಸೆಗೆ 150 ಜನರನ್ನು ಸ್ಕೀಮ್‌ಗೆ ಸೇರಿಸಿದ ಯುವಕ!
ಈ ಯೋಜನೆಯ ಏಜೆಂಟ್ ನಿಹಾಲ್ ಪ್ರತಿ ಕಾರ್ಡಿಗೆ 300 ರೂಪಾಯಿ ಕಮಿಷನ್ ದೊರೆಯುವ ಆಸೆಯಲ್ಲಿ , 2023ರ ಮೇ ತಿಂಗಳಿನಿಂದ ಸುಮಾರು 150 ಗ್ರಾಹಕರನ್ನು ಸೇರಿಸಿ ಒಟ್ಟು 24 ಲಕ್ಷ ರೂ. ಹಣವನ್ನು ಸಂಗ್ರಹಿಸಿ ಆರೋಪಿಗಳ ಫೋನ್‌ಪೇ ಖಾತೆಗಳಿಗೆ ಜಮಾ ಮಾಡಿದ್ದರು. ಆದರೆ 2025ರ ಮೇನಲ್ಲಿ ಯೋಜನೆ ಮುಗಿದರೂ ಗೃಹಪಯೋಗಿ ಬಹುಮಾನ ಅಥವಾ ಹಣ ಮರುಪಾವತಿ ಆಗಿಲ್ಲ.
ಸಾವಿರಾರು ಮಂದಿಗೆ ಮೋಸ- ಸಾರ್ವಜನಿಕರಿಗೆ 3 ಕೋಟಿ ಪಂಗನಾಮ!
ನಿಹಾಲ್ ಮಾತ್ರವಲ್ಲದೆ ಇನ್ನೂ 7-8 ಜನ ಏಜೆಂಟರುಗಳ ಮೂಲಕ ಸುಮಾರು 1960ಕ್ಕೂ ಹೆಚ್ಚು ಜನರಿಂದ ಹಣ ಸಂಗ್ರಹಿಸಲಾಗಿದೆ. ಒಟ್ಟಾರೆ 3 ಕೋಟಿಗೂ ಅಧಿಕ ಮೊತ್ತ ವಂಚನೆಗೆ ಒಳಗಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಸಾರ್ವಜನಿಕರ ನಂಬಿಕೆ ದ್ರೋಹ ಮಾಡಿರುವ ಅಬ್ದುಲ್ ರಜಾಕ್ ಹಾಗೂ ಶೇಕ್ ಮಹಮ್ಮದ್ ಫಜಲ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು, ಕಳೆದುಕೊಂಡಿರುವ ಹಣವನ್ನು ಹಿಂದಿರುಗಿಸಿಕೊಡುವಂತೆ ನಿಹಾಲ್ ಮಾ.28 ರಂದು ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಬ್ದುಲ್ ರಜಾಕ್ ಎಂಬಾತನನ್ನು ಹೊಸನಗರ ಪೊಲೀಸರು ಶನಿವಾರ ವಶಕ್ಕೆ ಪಡೆದಿದ್ದು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು.
ಅಯಾನ್ ಗ್ರೂಪ್ ಮಾಲೀಕನನ್ನು ಬಂಧಿಸಿದ್ದಾರೆ ಎಂಬ ವಿಷಯ ತಿಳಿಯುತಿದ್ದಂತೆ ಹೊಸನಗರ ಠಾಣೆ ಮುಂಭಾಗದಲ್ಲಿ ಮೋಸಹೋದ ಗ್ರಾಹಕರು ಜಮಾವಣೆಗೊಂಡು ಸ್ಥಳದಲ್ಲಿ ಅಕ್ರೋಶವನ್ನು ಹೊರ ಹಾಕಿದರು.
















Leave a Reply