ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆ ಹೋರಾಟಕ್ಕೆ ಬೆಂಬಲವಾಗಿ ನಾವು ಭಾಗಿಯಾಗುತ್ತೇವೆ: ಕಲಗೋಡು ರತ್ನಾಕರ್
ಹೊಸನಗರ: ಅಂಗನವಾಡಿ ಕಾರ್ಯಕರ್ತೆಯರು ಸರ್ಕಾರದ ಎಲ್ಲಾ ಕೆಲಸಗಳಲ್ಲಿ ಭಾಗಿಯಾಗುತ್ತಿದ್ದರೂ ಅವರಿಗೆ ಕಡಿಮೆ ಸಂಬಳ ನೀಡಲಾಗುತ್ತಿದೆ. ಅವರನ್ನು ಶಾಶ್ವತ ನೌಕರರಾಗಿ ಪರಿಗಣಿಸಿ ಸಂಬಳ ಹೆಚ್ಚಳ ಮಾಡಬೇಕು. ಅವರ ಎಲ್ಲ ಹೋರಾಟಗಳಿಗೆ ನಾವು ಬೆಂಬಲವಾಗಿ ನಿಲ್ಲುತ್ತೇವೆ ಎಂದು ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್ ಹೇಳಿದರು.
ಹೊಸನಗರದ ಆಯುರ್ವೇದ ಸಭಾಭವನದ ಆವರಣದಲ್ಲಿ ತಾಲೂಕು ಮಟ್ಟದ ಅಂಗನವಾಡಿ ಕಾರ್ಯಕರ್ತೆಯರ ಸಹಾಯಕಿಯರ ಸಭೆ ಹಾಗೂ ಅಭಿನಂದನಾ ಸಮಾರಂಭವನ್ನು ಏರ್ಪಡಿಸಲಾಗಿದ್ದು, ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಅಂಗನವಾಡಿಗಳು ಶುರುವಾಗಿ ಸುಮಾರು 50 ವರ್ಷಗಳು ಕಳೆದಿದ್ದು, ಹೊಸನಗರ ತಾಲೂಕಿನಲ್ಲಿ ಸುಮಾರು 400 ಅಂಗನವಾಡಿಗಳಲ್ಲಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಇವರೆಲ್ಲರಿಗೂ ಗೌರವಧನ ರೂಪದಲ್ಲಿ ಮಾತ್ರ ಸಂಬಳ ನೀಡಲಾಗುತ್ತಿದೆ. ಇದು ಬೇಸರದ ಸಂಗತಿ. ಹಲವಾರು ಕಾರ್ಯಕರ್ತೆಯರು ನಿವೃತ್ತಿ ಹೊಂದಿದ್ದರೂ ಅವರಿಗೆ ಯಾವುದೇ ರೀತಿಯ ಸರ್ಕಾರದ ಸೌಲಭ್ಯ ದೊರೆಯುತ್ತಿಲ್ಲ. ಮುಂದಿನ ದಿನಗಳಲ್ಲಿ ಅವರನ್ನು ಶಾಶ್ವತ ನೌಕರರಾಗಿ ಪರಿಗಣಿಸಿ ಸಂಬಳ ಹೆಚ್ಚಳ ಮಾಡುವಂತೆ ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು.
ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಶನ್ ರಾಜ್ಯ ಸಂಚಾಲಕರಾದ ಎನ್. ರವೀಂದ್ರ ಸಾಗರ್ ಮಾತನಾಡಿ, ಕಳೆದ 30 ವರ್ಷಗಳಿಂದ ಸರ್ಕಾರದ ವಿರುದ್ಧ ಹೋರಾಟ ನಡೆಸುತ್ತಿದ್ದೇವೆ. ಆದರೆ ಇನ್ನೂ ಅಂಗನವಾಡಿ ಕಾರ್ಯಕರ್ತೆಯರನ್ನು ಶಾಶ್ವತ ನೌಕರರಾಗಿ ಪರಿಗಣಿಸಿಲ್ಲ. ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳಿಸಲಾಗುವುದು. ಕಾರ್ಯಕರ್ತೆಯರಿಗೆ 30 ಸಾವಿರ ರೂ. ಹಾಗೂ ಸಹಾಯಕಿಯರಿಗೆ 15 ಸಾವಿರ ರೂ. ಗೌರವಧನ ನೀಡಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಅಂಗನವಾಡಿ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ಶ್ರೀಮತಿ ಶಶಿಕಲಾ ಗಣಪತಿ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಅಂಗನವಾಡಿ ಫೆಡರೇಶನ್ ರಾಜ್ಯ ಸಂಚಾಲಕ ಎನ್. ರವೀಂದ್ರ ಸಾಗರ್, ತಾಲೂಕು ಪಂಚಾಯತ್ ಮಾಜಿ ಸದಸ್ಯರಾದ ಚಂದ್ರಮೌಳಿಗೌಡ, ಏರಿಗೇ ಉಮೇಶ್, ಪಟ್ಟಣ ಪಂಚಾಯತ್ ಮಾಜಿ ಅಧ್ಯಕ್ಷರಾದ ಹಾಲಗದ್ದೆ ಉಮೇಶ್, ಸುಶೀಲಾಬಾಯಿ, ಶ್ರೀಮತಿ ವಿಶಾಲಾಬಾಯಿ, ಗಾಯತ್ರಿ ಹೆಗಡೆ, ಶ್ರೀಮತಿ ವೇದಾವತಿ, ಶ್ರೀಮತಿ ಪುಷ್ಪ, ಶ್ರೀಮತಿ ರೇಣುಕಾ, ತಾಲೂಕು ಸಂಘದ ಗೌರವಾಧ್ಯಕ್ಷೆ ಶ್ರೀಮತಿ ತಾರಾ, ಅಧ್ಯಕ್ಷೆ ಶಶಿಕಲಾ, ಸಹಾಯಕಿ ಶರ್ಮಿಳಾ, ಉಪಾಧ್ಯಕ್ಷೆ ಜಯಮ್ಮ, ಕಾರ್ಯದರ್ಶಿ ಎಸ್.ಎನ್. ಗೀತಾ ರವಿ, ಲೀಲಾವತಿ, ಸಹ ಕಾರ್ಯದರ್ಶಿ ಲೀಲಾವತಿ, ದಿವ್ಯ ಮಧು, ಉಮಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

















Leave a Reply