ರಿಪ್ಪನ್ ಪೇಟೆ: ಕಾರ್ಮಿಕ ಕಾರ್ಡ್ ಹೆಸರಲ್ಲಿ ತಾಲೂಕು ಅಧ್ಯಕ್ಷ ಮಹಮ್ಮದ್ ಹುಸೈನ್ ಹಾಗೂ ಸಂಘದ ಪದಾಧಿಕಾರಿಗಳ ವಿರುದ್ಧ ಮಾಡಲಾಗಿರುವ ಆರೋಪಗಳು ರಾಜಕೀಯ ಪ್ರೇರಿತ ಹಾಗೂ ಸಂಪೂರ್ಣ ನಿರಾಧಾರವಾಗಿದ್ದು, ಆರೋಪಗಳಿಗೆ ದಾಖಲೆಗಳಿದ್ದರೆ ಯಾವುದೇ ತನಿಖೆಗೂ ನಾವು ಬದ್ಧರಾಗಿದ್ದೇವೆ ಎಂದು ಅಖಿಲ ಕರ್ನಾಟಕ ಕಟ್ಟಡ ಕಾರ್ಮಿಕ ಸಂಘದ ಜಿಲ್ಲಾಧ್ಯಕ್ಷ ಕೆ. ಸಂಜಯ್ ಕುಮಾರ್ ಹೇಳಿದರು.
ಪಟ್ಟಣದ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ಅಖಿಲ ಕರ್ನಾಟಕ ಕಟ್ಟಡ ಕಾರ್ಮಿಕ ಸಂಘಟನೆ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವರು ವೈಯಕ್ತಿಕ ದ್ವೇಷ ಸಾಧಿಸಲು ಅಮಾಯಕ ಕಾರ್ಮಿಕರನ್ನು ಬಳಸಿಕೊಂಡು ಸಂಘದ ತೇಜೋವಧೆ ಮಾಡುವ ಪ್ರಯತ್ನ ನಡೆಸಿದ್ದಾರೆ ಎಂದು ಆರೋಪಿಸಿದರು.
ಇತ್ತೀಚೆಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಾರ್ಮಿಕ ಕಾರ್ಡ್ ವಿಳಂಬ, ಹೆಚ್ಚುವರಿ ಹಣ ವಸೂಲಿ ಸೇರಿದಂತೆ ಹಲವು ಆರೋಪಗಳನ್ನು ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಸಂಘಟನೆಯು ಆಂತರಿಕ ತನಿಖೆ ನಡೆಸಿದ್ದು, ಆರೋಪಗಳಲ್ಲಿ ಯಾವುದೇ ಹುರುಳಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ಹೇಳಿದರು.
ಸಂಘವು ಪ್ರತಿಯೊಂದು ಘಟಕದಲ್ಲೂ ಪ್ರತಿ ತಿಂಗಳು ಸಭೆ ನಡೆಸುತ್ತಿದ್ದು, ಕಳೆದ ಮೂರು-ನಾಲ್ಕು ವರ್ಷಗಳಲ್ಲಿ ಈ ರೀತಿಯ ದೂರುಗಳು ಎಲ್ಲಿಯೂ ಪ್ರಸ್ತಾಪವಾಗಿಲ್ಲ. ಯಾರ ಬಳಿಯೇ ದಾಖಲೆ ಅಥವಾ ಸಾಕ್ಷ್ಯವಿದ್ದರೂ ಕಾನೂನುಬದ್ಧ ತನಿಖೆ ನಡೆಸಲಿ, ನಾವು ಸಂಪೂರ್ಣ ಸಹಕರಿಸುತ್ತೇವೆ ಎಂದು ಸಂಜಯ್ ಕುಮಾರ್ ತಿಳಿಸಿದರು.
ಕಾರ್ಯಾಧ್ಯಕ್ಷ ಕೆ. ಸುಂದರ್ ಬಾಬು ಮಾತನಾಡಿ, ಕಟ್ಟಡ ಕಾರ್ಮಿಕರ ಆರ್ಥಿಕ ನೆರವು, ಆರೋಗ್ಯ ಸಮಸ್ಯೆ, ಮಕ್ಕಳ ಶಿಕ್ಷಣ ಸೇರಿದಂತೆ ಹಲವು ಸಾಮಾಜಿಕ ಕಾರ್ಯಗಳಲ್ಲಿ ಸಂಘಟನೆ ನಿರಂತರವಾಗಿ ತೊಡಗಿಕೊಂಡಿದೆ. ಕಾರ್ಮಿಕರಿಗೆ ನೈತಿಕ ಧೈರ್ಯ ತುಂಬುವ ಕೆಲಸವನ್ನು ಸಂಘ ಮಾಡುತ್ತಿರುವುದೇ ಕೆಲವರಿಗೆ ಸಹಿಸಿಕೊಳ್ಳಲಾಗದೆ ಇಂತಹ ಆರೋಪಗಳು ಕೇಳಿಬರುತ್ತಿವೆ ಎಂದು ಹೇಳಿದರು.
ತಾಲೂಕು ಅಧ್ಯಕ್ಷ ಮಹಮ್ಮದ್ ಹುಸೈನ್ ಮಾತನಾಡಿ, “ನಾವು ದುಡಿದು ಬದುಕುವ ಕಾರ್ಮಿಕರು. ಸಮಾಜದ ಹಣದಿಂದ ಬದುಕುವ ಅವಶ್ಯಕತೆ ನಮಗಿಲ್ಲ. ಅಮಾಯಕ ಕಾರ್ಮಿಕರನ್ನು ದಾರಿ ತಪ್ಪಿಸಿ ಬಡವರನ್ನು ಬಲಿಕೊಡುವ ಕೆಲಸ ನಡೆದಿದೆ. ನಿರಾಧಾರ ಆರೋಪಗಳಿಗೆ ಮುಂದಿನ ದಿನಗಳಲ್ಲಿ ಸಂಘಟನಾತ್ಮಕವಾಗಿ ಉತ್ತರ ನೀಡುತ್ತೇವೆ” ಎಂದು ತಿರುಗೇಟು ನೀಡಿದರು.
ಹೆಚ್ಚುವರಿ ಹಣ ಪಡೆದು ಕಾರ್ಡ್ ಮಾಡಲಾಗುತ್ತಿದೆ ಎಂಬ ಆರೋಪ ಕುರಿತು ಪ್ರತಿಕ್ರಿಯಿಸಿದ ಅವರು, “₹50 ಅಥವಾ ₹100ಕ್ಕೆ ಕಾರ್ಡ್ ಅನ್ನು ತಾವೇ ನಿಮ್ಮ ಸೈಬರ್ ನಲ್ಲಿ ಮಾಡಿಕೊಡುತ್ತೀರಾ ಎಂದು ಪ್ರಶ್ನಿಸಿದರು. ಆರೋಪ ಮಾಡಿದ ಅಮಾಯಕ ಕಾರ್ಮಿಕರ ಜೊತೆಯಲಿದ್ದ ವ್ಯಕ್ತಿಯ ತಂದೆ ಸಂಘದ ಸದಸ್ಯರಾಗಿದ್ದು, ಅವರ ಕುಟುಂಬದೊಂದಿಗೆ ನಮಗೆ ಗೌರವದ ಸಂಬಂಧವಿದೆ. ಆದರೂ ಪುತ್ರ ನಿರಾಧಾರ ಆರೋಪ ಮಾಡಿರುವುದು ಬೇಸರ ತಂದಿದೆ ಎಂದರು.

ಸುದ್ದಿಗೋಷ್ಠಿಗೂ ಮುನ್ನ, ಶಸ್ತ್ರಚಿಕಿತ್ಸೆ ವೇಳೆ ಮೃತಪಟ್ಟ ಕೋಡೂರು ಸಮೀಪದ ಶಾಖವಳ್ಳಿ ಗ್ರಾಮದ ಸುಮಾ ಅವರ ಕುಟುಂಬಕ್ಕೆ ಕಾರ್ಮಿಕ ಸಂಘದ ವತಿಯಿಂದ ಧನಸಹಾಯ ವಿತರಿಸಲಾಯಿತು. ಪಿಎಸ್‌ಐ ರಾಜುರೆಡ್ಡಿ ಅವರು ದಿ.ಸುಮಾ ಅವರ ಕುಟುಂಬಕ್ಕೆ ನೆರವು ಹಸ್ತಾಂತರಿಸಿದರು.
ಸುದ್ದಿಗೋಷ್ಠಿಯಲ್ಲಿ ಶಂಕರಾಚಾರಿ ಕೆ., ಬಿ.ಎನ್. ರಾಘವೇಂದ್ರ, ಪ್ರಭಾಕರ್, ನಾಗರಾಜ್, ಸುಬ್ರಹ್ಮಣ್ಯ ಎನ್.ಆರ್., ಅಬ್ದುಲ್ ಖಾದರ್, ಚಂದ್ರಶೇಖರ, ಸತೀಶ್ ಪೂಜಾರಿ, ಕೃಷ್ಣಪ್ಪ ಆರ್., ಗೋಪಾಲ್, ಗಣೇಶ್ ಮೂರ್ತಿ, ದಾಮೋದರ ಆಚಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

















Leave a Reply