ರಿಪ್ಪನ್‌ಪೇಟೆ: ಸುದೀರ್ಘ 28 ವರ್ಷಗಳ ಕಾಲ ಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಶಿಕ್ಷಕ ಮಂಜುನಾಥ್ ಹೆಚ್.ಸಿ. ಅವರಿಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂಜವಳ್ಳಿಯ ಹಳೆಯ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರ ವತಿಯಿಂದ ಆತ್ಮೀಯ ಬೀಳ್ಕೊಡುಗೆ ಮತ್ತು ಸನ್ಮಾನ ಕಾರ್ಯಕ್ರಮ ನಡೆಯಿತು.
ಸಮೀಪದ ಹರತಾಳು ಗ್ರಾ. ಪಂಚಾಯಿತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂಜವಳ್ಳಿಯಲ್ಲಿ ಶಾಲೆಯಲ್ಲಿ ಹಿಂದೆ ಸೇವೆ ಸಲ್ಲಿಸಿದ್ದ ಶಿಕ್ಷಕರಾದ ಉಮೇಶ್ ಮತ್ತು ಶುಭ, ಹರತಾಳು ಶಾಲೆಯ ಶಿಕ್ಷಕ ಗಣಪತಿ, ಎಸ್‌ಡಿಎಂಸಿ ಅಧ್ಯಕ್ಷ ರಾಘವೇಂದ್ರ, ಅಡುಗೆ ಸಿಬ್ಬಂದಿಗಳಾದ ನಾಗರತ್ನ ಹಾಗೂ ಪದ್ಮ ಅವರಿಗೂ ಗ್ರಾಮಸ್ಥರು ಮತ್ತು ಹಿರಿಯ ವಿದ್ಯಾರ್ಥಿಗಳ ವತಿಯಿಂದ ಸನ್ಮಾನಿಸಲಾಯಿತು.
ಹರತಾಳು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರವೀಂದ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಳಿಕ ಶಿಕ್ಷಕರಾದ ಉಮೇಶ್, ಶುಭ ಹಾಗೂ ನಿವೃತ್ತ ಶಿಕ್ಷಕ ಗಣಪತಿ ಅವರು ಮಂಜುನಾಥ್ ಅವರೊಂದಿಗಿನ ಒಡನಾಟ ಮತ್ತು ಸೇವಾ ನೆನಪುಗಳನ್ನು ಹಂಚಿಕೊಂಡರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಮಂಜುನಾಥ್ ಹೆಚ್.ಸಿ., “28 ವರ್ಷಗಳ ಸೇವೆಯಲ್ಲಿ ಶಾಲೆ ಮತ್ತು ಗ್ರಾಮಸ್ಥರೊಂದಿಗೆ ಬೆಳೆಸಿಕೊಂಡ ಬಾಂಧವ್ಯ ನನ್ನ ಜೀವನದ ಅಮೂಲ್ಯ ಸಂಪತ್ತು. ನಿಮ್ಮ ಪ್ರೀತಿ ವಿಶ್ವಾಸಕ್ಕೆ ನಾನು ಸದಾ ಚಿರಋಣಿ. ನಿವೃತ್ತಿಯಾದರೂ ಈ ಊರಿನ ಆತ್ಮೀಯತೆ ನನ್ನ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯಲಿದೆ,” ಎಂದು ಭಾವುಕರಾಗಿ ನುಡಿದರು.
ಕಾರ್ಯಕ್ರಮದಲ್ಲಿ ಹಿರಿಯ ವಿದ್ಯಾರ್ಥಿಗಳಾದ ಗುರುರಾಜ್, ಶ್ರೀಧರ್, ಭಾಸ್ಕರ್, ಹೇಮಂತ್, ಪೂಜಾ ಸೇರಿದಂತೆ ಹಲವರು ಅನಿಸಿಕೆ ಹಂಚಿಕೊಂಡರು. ಆದಿತ್ಯ ನಂಜವಳ್ಳಿ, ಚಂದನ, ಹರ್ಷಿತಾ ಹಾಗೂ ಸೀಮಾ ಕಾರ್ಯಕ್ರಮ ನಿರ್ವಹಿಸಿದರು.

















Leave a Reply