
ರಿಪ್ಪನ್ಪೇಟೆ: ರಿಪ್ಪನ್ಪೇಟೆ -ತೀರ್ಥಹಳ್ಳಿಯನ್ನು ಸಂಪರ್ಕಿಸುವ ರಾಜ್ಯ ಹೆದ್ದಾರಿಯಲ್ಲಿ ಗರ್ತಿಕೆರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಶಿವಪುರ ಸಮೀಪದ ರಸ್ತೆ ಬದಿಯಲ್ಲಿ ಅಪಾಯಕಾರಿಯಾಗಿ ನಿಂತಿದ್ದ ಒಣಗಿದ ಬೃಹತ್ ಮರವನ್ನು ಅರಣ್ಯ ಇಲಾಖೆ ಶುಕ್ರವಾರ ಯಶಸ್ವಿಯಾಗಿ ತೆರವುಗೊಳಿಸಿತು.
ಸ್ಥಳೀಯರ ಮಾಹಿತಿ ಪ್ರಕಾರ, ರಸ್ತೆ ಬದಿಯಲ್ಲಿದ್ದ ಈ ಮರವು ಸಂಪೂರ್ಣವಾಗಿ ಒಣಗಿದ್ದು, ಯಾವುದೇ ಕ್ಷಣದಲ್ಲಿ ರಸ್ತೆಯ ಮೇಲೆ ಉರುಳಿ ಭಾರೀ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು. ಈ ಕುರಿತು ಸಾರ್ವಜನಿಕರು ಅರಣ್ಯ ಇಲಾಖೆಯ ಗಮನಕ್ಕೆ ತಂದಿದ್ದರು. ಸಾರ್ವಜನಿಕರ ಮನವಿಗೆ ಸ್ಪಂದಿಸಿದ ಇಲಾಖೆ ಮುನ್ನೆಚ್ಚರಿಕಾ ಕ್ರಮವಾಗಿ ಮರ ತೆರವು ಕಾರ್ಯಾಚರಣೆ ನಡೆಸಿ ಸಂಭವಿಸಬಹುದಾದ ಅಪಾಯವನ್ನು ತಪ್ಪಿಸಿದೆ.

ಮರ ತೆರವು ಕಾರ್ಯಾಚರಣೆಯ ವೇಳೆ ಸುರಕ್ಷತಾ ದೃಷ್ಟಿಯಿಂದ ಹೆದ್ದಾರಿಯಲ್ಲಿ ವಾಹನ ಸಂಚಾರವನ್ನು ಕೆಲಕಾಲ ಸ್ಥಗಿತಗೊಳಿಸಲಾಗಿತ್ತು. ಇದರ ಪರಿಣಾಮ ಶಿವಪುರದಿಂದ ರಿಪ್ಪನ್ಪೇಟೆ ಕಡೆಗೆ ಹಾಗೂ ತೀರ್ಥಹಳ್ಳಿ ಕಡೆಗೆ ಸುಮಾರು 2 ಕಿ.ಮೀ.ವರೆಗೆ ವಾಹನಗಳ ಸಾಲು ನಿರ್ಮಾಣವಾಗಿ ಟ್ರಾಫಿಕ್ ಜಾಮ್ ಉಂಟಾಯಿತು. ಕಾರ್ಯಾಚರಣೆ ಪೂರ್ಣಗೊಂಡ ಬಳಿಕ ಸಂಚಾರವನ್ನು ಪುನಃ ಸುಗಮಗೊಳಿಸಲಾಯಿತು.
ಕಾರ್ಯಾಚರಣೆಯ ವೇಳೆ ಕೆಲ ಸಾರ್ವಜನಿಕರು ತಮಗೆ ತುರ್ತು ಪ್ರಯಾಣವಿರುವುದಾಗಿ ತಿಳಿಸಿ ವಾಹನ ಸಂಚಾರಕ್ಕೆ ಅವಕಾಶ ನೀಡುವಂತೆ ಮನವಿ ಮಾಡಿದರು. ಈ ವೇಳೆ ಸಾರ್ವಜನಿಕರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿಯ ನಡುವೆ ಮಾತಿನ ಚಕಮಕಿ ನಡೆದಿರುವುದು ತಿಳಿದುಬಂದಿದೆ.
ಇದಕ್ಕೆ ಸಾರ್ವಜನಿಕರಿಗೆ ಪ್ರತಿಕ್ರಿಯಿಸಿದ ಸಿಬ್ಬಂದಿಯೊಬ್ಬರು , “ನಿಮ್ಮ ಸುರಕ್ಷತೆಯೇ ನಮ್ಮ ಮೊದಲ ಆದ್ಯತೆ. ಮರ ತೆರವುಗೊಳಿಸುವ ಸಂದರ್ಭದಲ್ಲಿ ವಾಹನಗಳನ್ನು ಬಿಡುವುದು ಅಪಾಯಕಾರಿಯಾಗಿದೆ. ಯಾವುದೇ ಅನಾಹುತ ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಿರುವುದರಿಂದ ಸ್ವಲ್ಪ ಸಮಯ ಸಹಕರಿಸಿ,” ಎಂದು ಜವಾಬ್ದಾರಿಯುತವಾಗಿ ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಟ್ಟರು.
ಈ ಸಂದರ್ಭದಲ್ಲಿ ಉಪವಲಯ ಅರಣ್ಯಾಧಿಕಾರಿ ಶೋಭಾ, ಮತ್ತು ಸಿಬ್ಬಂದಿ ವರ್ಗ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಡೆಸಿದರು.


















Leave a Reply