ಹೊಸನಗರ: ಮಲೆನಾಡು ಅಡಿಕೆ ಮಾರಾಟ ಸಹಕಾರ ಸಂಘವು ಕಳೆದ ಸುಮಾರು 85 ವರ್ಷಗಳಿಂದ ಅಡಿಕೆ ಬೆಳೆಗಾರರು ಹಾಗೂ ಕೂಲಿ ಕಾರ್ಮಿಕರ ಕಲ್ಯಾಣಕ್ಕಾಗಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದು, ಅವರಿಗೆ ಯಾವುದೇ ಸಂಕಷ್ಟ ಎದುರಾದರೂ ಬೆನ್ನೆಲುಬಾಗಿ ನಿಂತು ಸಹಾಯ ಮಾಡುತ್ತಿದೆ ಎಂದು ಸಂಘದ ಉಪಾಧ್ಯಕ್ಷ ಹೆಚ್.ಎಸ್. ಮಹೇಶ್ ಹುಲ್ಕುಳಿ ಹೇಳಿದರು.
ಅವರು ಹೊಸನಗರದಲ್ಲಿರುವ ಸಂಘದ ಆವರಣದಲ್ಲಿ ಕೂಲಿ ಕಾರ್ಮಿಕರಾದ ಪುಟ್ಟಸ್ವಾಮಿಯವರ ಪತ್ನಿ ಇಂದಿರಾ ಅವರಿಗೆ 6 ಲಕ್ಷ ರೂ. ಪರಿಹಾರದ ಚೆಕ್ ವಿತರಿಸಿ ಮಾತನಾಡಿದರು.
ಪುಟ್ಟಸ್ವಾಮಿಯವರು ಅಡಿಕೆ ಕೊಯ್ಯುವ ವೇಳೆ ಅಲ್ಯೂಮಿನಿಯಂ ದೋಟಿ ವಿದ್ಯುತ್ ತಂತಿಗೆ ತಗುಲಿದ ಪರಿಣಾಮ ದುರಂತವಾಗಿ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಮಲೆನಾಡು ಅಡಿಕೆ ಬೆಳೆಗಾರರ ಸಂಘದ ಗುಂಪು ವಿಮೆ ಯೋಜನೆಯಡಿ 6 ಲಕ್ಷ ರೂ. ಮಂಜೂರಾಗಿ, ಅದನ್ನು ಅವರ ಪತ್ನಿಗೆ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮಹೇಶ್ ಹುಲ್ಕುಳಿ, ಈ ವರ್ಷವೂ ಹಲವಾರು ಕೂಲಿ ಕಾರ್ಮಿಕರ ಕುಟುಂಬಗಳಿಗೆ ಗುಂಪು ವಿಮೆ ಹಣವನ್ನು ವಿತರಿಸಲಾಗಿದೆ. ಪ್ರತಿಯೊಬ್ಬ ಅಡಿಕೆ ಬೆಳೆಗಾರರೂ ಗುಂಪು ವಿಮೆ ಯೋಜನೆಗೆ ಸೇರ್ಪಡೆಗೊಂಡರೆ ತಮ್ಮೊಂದಿಗೆ ಕೆಲಸ ಮಾಡುವ ಕಾರ್ಮಿಕರ ಕುಟುಂಬಗಳಿಗೆ ಸಹಾಯವಾಗುತ್ತದೆ ಎಂದು ತಿಳಿಸಿದರು.

ಸಂಘದ ಮರಣೋತ್ತರ ನಿಧಿ ಯೋಜನೆಯಡಿ ಕೃಷ್ಣಮೂರ್ತಿ ಕೀಳಂಬಿ ಅವರ ನಿಧನದ ಹಿನ್ನೆಲೆಯಲ್ಲಿ ಅವರ ಪುತ್ರ ರಾಘವ ಅವರಿಗೆ 1 ಲಕ್ಷ ರೂ. ಚೆಕ್ ವಿತರಿಸಲಾಯಿತು.
ಈ ಯೋಜನೆಯಡಿ ನಿರಂತರವಾಗಿ ಸಂಘಕ್ಕೆ ಅಡಿಕೆ ಪೂರೈಸುವ ಸದಸ್ಯರು ಮರಣೋತ್ತರ ನಿಧಿಗೆ 10 ಸಾವಿರ ರೂ. ತೊಡಗಿಸಿದಲ್ಲಿ, ಅವರ ಕುಟುಂಬಕ್ಕೆ 1 ಲಕ್ಷ ರೂ. ಪರಿಹಾರ ದೊರೆಯಲಿದೆ. ಅಡಿಕೆ ಪೂರೈಸದ ಸದಸ್ಯರು 10 ಸಾವಿರ ರೂ. ಪಾವತಿಸಿದಲ್ಲಿ, ಅವರ ಕುಟುಂಬಕ್ಕೆ 50 ಸಾವಿರ ರೂ. ನೆರವು ದೊರೆಯುತ್ತದೆ. ಇದಲ್ಲದೆ, ತುರ್ತು ಸಂದರ್ಭಗಳಲ್ಲಿ ಸದಸ್ಯರು ತಮ್ಮ ಹಣವನ್ನು ಬ್ಯಾಂಕ್ ಬಡ್ಡಿಯೊಂದಿಗೆ ಹಿಂದಿರುಗಿಸಿಕೊಳ್ಳುವ ಅವಕಾಶವೂ ಈ ಯೋಜನೆಯಲ್ಲಿ ಇದೆ. ಈ ಯೋಜನೆಗಳಿಂದ ಕುಟುಂಬಗಳಿಗೆ ಆರ್ಥಿಕ ಭದ್ರತೆ ದೊರೆಯುವುದರಿಂದ ಎಲ್ಲಾ ಅಡಿಕೆ ಬೆಳೆಗಾರರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮಹೇಶ್ ಹುಲ್ಕುಳಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ನಿರ್ದೆಶಕರಾದ ಕೆ.ವಿ. ಕೃಷ್ಣಮೂರ್ತಿ, ಹೆಚ್. ಧರ್ಮೇಂದ್ರ, ರತ್ನಾಕರ್, ವ್ಯವಸ್ಥಾಪಕರಾದ ಗಣಪತಿ, ಸಿಬ್ಬಂದಿಗಳಾದ ಶ್ರೀಮತಿ ವಿದ್ಯಾ, ಲೀಲಾವತಿ, ದಿವ್ಯ, ಮಧುಸೂದನ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

















Leave a Reply