ರಿಪ್ಪನ್‌ಪೇಟೆ: ಶ್ರೀ ಬಸವೇಶ್ವರ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭವು ಸೋಮವಾರ ವಿಜೃಂಭಣೆಯಿಂದ ನಡೆಯಿತು. ಕಾರ್ಯಕ್ರಮವನ್ನು ಉಡುಪಿ ಜಿಲ್ಲೆಯ ನಿವೃತ್ತ ಉಪನಿರ್ದೇಶಕರಾದ ಕೆ. ಗಣಪತಿ ಉದ್ಘಾಟಿಸಿ ಮಾತನಾಡಿದರು.
“ಮಕ್ಕಳಿಗೆ ಆಸ್ತಿ ಮಾಡುವುದಕ್ಕಿಂತ ಮಕ್ಕಳನ್ನೇ ಆಸ್ತಿಯಾಗಿ ರೂಪಿಸಿ. ಪೋಷಕರು ಮಕ್ಕಳ ಶಿಕ್ಷಣದ ಜೊತೆಗೆ ಅವರ ಬೆಳವಣಿಗೆ, ಆತ್ಮವಿಶ್ವಾಸ ಮತ್ತು ನಡವಳಿಕೆಯ ಮೇಲೂ ಗಮನಹರಿಸಬೇಕು. ಶಿಕ್ಷಕರು ಮೌಲ್ಯಾಧಾರಿತ ಶಿಕ್ಷಣದೊಂದಿಗೆ ಮಕ್ಕಳಲ್ಲಿ ಆತ್ಮಸ್ಥೈರ್ಯ ಬೆಳೆಸುವ ಕಾರ್ಯ ಮಾಡಬೇಕು” ಎಂದು ಅವರು ಪುನರುತ್ಚರಿಸಿದರು.
ಕೇವಲ ಶೇ.100 ಅಂಕ ಗಳಿಸುವುದೇ ಸಾಧನೆಯಲ್ಲ. ವಿದ್ಯಾರ್ಥಿಗಳು ಎಲ್ಲ ಕ್ಷೇತ್ರಗಳಲ್ಲೂ ಪ್ರಗತಿ ಸಾಧಿಸಿ ಸುಸಂಸ್ಕೃತ ನಾಗರಿಕರಾಗಿ ಬೆಳೆಯಲು ಪೋಷಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಅವರು ಕಿವಿಮಾತು ಹೇಳಿದರು.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಆನಂದಪುರ ಮುರುಘಾರಾಜೇಂದ್ರ ಸಂಸ್ಥಾನ ಮಠದ ಜಗದ್ಗುರು ಡಾ. ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಮಹಾಸ್ವಾಮೀಜಿ ವಹಿಸಿ ಆಶೀರ್ವಚನ ನೀಡಿದರು. ಮಕ್ಕಳಲ್ಲಿರುವ ಪ್ರತಿಭೆ ಮತ್ತು ಸಾಮರ್ಥ್ಯವನ್ನು ಗುರುತಿಸಿ ಬೆಳೆಸುವುದೇ ನಿಜವಾದ ಶಿಕ್ಷಣವಾಗಿದ್ದು, ಅದಕ್ಕೆ ಅಗತ್ಯವಾದ ವಾತಾವರಣ ಕಲ್ಪಿಸುವ ಹೊಣೆ ಶಾಲೆ ಹಾಗೂ ಪೋಷಕರ ಮೇಲಿದೆ ಎಂದು ಹೇಳಿದರು.
ಇಂದಿನ ಶಿಕ್ಷಣ ದುಬಾರಿಯಾಗುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳ ಮೇಲೆ ಅಂಕಗಳ ಒತ್ತಡ ಹೇರದೆ, ಅವರ ಆಸಕ್ತಿ ಮತ್ತು ಸಾಮರ್ಥ್ಯಕ್ಕೆ ಅನುಗುಣವಾಗಿ ಶಿಕ್ಷಣ ನೀಡಬೇಕು ಎಂದು ಸಲಹೆ ನೀಡಿದ ಅವರು, 2025-26ನೇ ಸಾಲಿನ ಪ್ರಬಂಧ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಅಭಿನಂದಿಸಿ ಆಶೀರ್ವದಿಸಿದರು.
ಶಿಕ್ಷಣ ತಜ್ಞ ಸುಧಾಕರ್, ಸಂಸ್ಥೆಯ ನಿರ್ದೇಶಕರಾದ ಹೆಚ್.ಎಂ. ಚಂದ್ರಶೇಖರಯ್ಯ, ಹೆಚ್.ಎಂ. ವರ್ತೇಶಗೌಡ, ಎಲ್.ವೈ. ದಾನೇಶಪ್ಪ, ಚಂದ್ರಪ್ಪ ಕೆ., ಮಂಜುನಾಥ ಎ.ಜಿ., ಗುರುಪ್ರಕಾಶ್ ಕೆ.ಹೆಚ್., ಮುಖ್ಯ ಶಿಕ್ಷಕ ಕೆ.ಎನ್. ಚಂದ್ರಪ್ಪ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದು ಮಾತನಾಡಿದರು.
ಇದೇ ಸಂದರ್ಭದಲ್ಲಿ ಪೋಷಕ-ಶಿಕ್ಷಕ ಸಮಿತಿ ಹಾಗೂ ಮಕ್ಕಳ ಸುರಕ್ಷತಾ ಸಮಿತಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಖುಷಿ ಕೆ.ಯು. ಮತ್ತು ಸಾನಿಧ್ಯ ಪಾಟೀಲ್ ಪ್ರಾರ್ಥಿಸಿದರು. ನಂದನ್ ಪಿ. ಸ್ವಾಗತಿಸಿದರು. ಹೆಚ್.ಎಂ. ವರ್ತೇಶಗೌಡ ಪ್ರಾಸ್ತಾವಿಕ ಭಾಷಣ ಮಾಡಿದರು. ಬಾಂಧವ್ಯ ಕಾರ್ಯಕ್ರಮ ನಿರೂಪಿಸಿದರು. ಬಿ.ಬಿ. ಸುಮಯ್ಯ ವಂದಿಸಿದರು.















Leave a Reply