ಹೊಸನಗರ: ಧೈರ್ಯಕ್ಕೆ ವಯಸ್ಸಿನ ಮಿತಿಯಿಲ್ಲ ಎಂಬುದನ್ನು ಹೊಸನಗರ ತಾಲೂಕಿನ ಮೇಲಿನಬೇಸಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೋರಗೋಡು ಗ್ರಾಮದ 9 ವರ್ಷದ ಬಾಲಕ ನಂದನ್ ಜಿ.ಸಿ ತನ್ನ ಸಾಹಸ ಹಾಗೂ ಸಮಯಪ್ರಜ್ಞೆಯ ಮೂಲಕ ಸಾಬೀತುಪಡಿಸಿದ್ದಾನೆ.
ನಂದನ್ ಮತ್ತು ತಂದೆ ಚಂದ್ರು ಗೊರಗೋಡು ಸಮೀಪದ ಹೊಳೆಯ ಬಳಿ ತೆರೆಳಿದ್ದರು. ಇದೇ ವೇಳೆ ಚಂದ್ರು ಅವರಿಗೆ ಏಕಾಏಕಿ ಫಿಟ್ಸ್ (Fits) ಬಂದು ಜಾರಿ ಹೊಳೆಗೆ ಬಿದ್ದಿದ್ದು, ಹರಿಯುವ ನೀರಿನೊಂದಿಗೆ ಸುಮಾರು 2 ಕಿಲೋಮೀಟರ್ ದೂರ ತೇಲಿ ಹೋಗಿದ್ದಾರೆ.
ಈ ದೃಶ್ಯವನ್ನು ಕಂಡ ನಂದನ್ ಗಾಬರಿಗೊಳ್ಳದೆ, ಹೊಳೆಯ ದಡದ ಉದ್ದಕ್ಕೂ ಸುಮಾರು 2 ಕಿಲೋಮೀಟರ್ ಓಡುತ್ತಾ ತಂದೆಯನ್ನು ಹುಡುಕಿದ್ದಾನೆ. ಬಳಿಕ ಸಮೀಪದ ಮನೆಗಳಿಗೆ ಧಾವಿಸಿ, “ನನ್ನ ತಂದೆ ಹೊಳೆಯಲ್ಲಿ ತೇಲಿ ಹೋಗಿದ್ದಾರೆ, ಬನ್ನಿ ಕಾಪಾಡಿ” ಎಂದು ಸ್ಥಳೀಯರ ನೆರವು ಕೋರಿದ್ದಾನೆ.
ತಕ್ಷಣವೇ ಸ್ಥಳಕ್ಕೆ ಬಂದ ಗ್ರಾಮಸ್ಥರು ಹೊಳೆಯಲ್ಲಿ ಹುಡುಕಾಟ ಆರಂಭಿಸಿದರು. ಈ ವೇಳೆ ಹೊಳೆಯಲ್ಲಿ ತೇಲುತ್ತಿದ್ದ ಜರ್ಕಿನ್ನ್ನು ನಂದನ್ ಗುರುತಿಸಿ, ಅದೇ ಸ್ಥಳದಲ್ಲಿ ತಂದೆ ಇರಬಹುದೆಂದು ತಿಳಿಸಿದ್ದಾನೆ. ಕೂಡಲೇ ಸ್ಥಳೀಯರು ಚಂದ್ರು ಅವರನ್ನು ದಡಕ್ಕೆ ಎಳೆದು ರಕ್ಷಿಸಿ, ಪ್ರಥಮ ಚಿಕಿತ್ಸೆ ನೀಡಿ ಜೀವ ಉಳಿಸಿದ್ದಾರೆ.


ಅಪ್ಪ ಹೊಳೆಯಲ್ಲಿ ಬಿದ್ದಾಗ ನನಗೆ ತುಂಬಾ ಭಯವಾಯಿತು. ಆದರೂ ಧೈರ್ಯ ಕಳೆದುಕೊಳ್ಳದೆ ಹತ್ತಿರದ ಮನೆಗಳಿಗೆ ಓಡಿ ಹೋಗಿ ಸಹಾಯ ಕೇಳಿದೆ. ಗ್ರಾಮಸ್ಥರು ಕೂಡಲೇ ಬಂದು ಅಪ್ಪನನ್ನು ರಕ್ಷಿಸಿದರು. ಅಪ್ಪ ಈಗ ಸುರಕ್ಷಿತರಾಗಿರುವುದೇ ನನಗೆ ತುಂಬಾ ಸಂತೋಷ. – ನಂದನ್, ಸಾಹಸಿ ಬಾಲಕ
ಸಾಹಸಿ ಬಾಲಕನಿಗೆ ಮೆಚ್ಚುಗೆ: ತಂದೆ ಅಪಾಯದಲ್ಲಿದ್ದಾಗ ಸಮಯಪ್ರಜ್ಞೆ ಮತ್ತು ಧೈರ್ಯದಿಂದ ನಡೆದುಕೊಂಡ ನಂದನ್ ಜಿ.ಸಿ ಅವರ ಸಾಹಸಕ್ಕೆ ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.
ನಂದನ್ ಗೋರಗೋಡು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ 4ನೇ ತರಗತಿ ವಿದ್ಯಾರ್ಥಿಯಾಗಿದ್ದು, ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದ ದಲಿತ ಕುಟುಂಬದ ಚಂದ್ರು- ಗಾಯತ್ರಿ ದಂಪತಿಯ ಪುತ್ರ. ತಂದೆ ಚಂದ್ರು ದಿನಗೂಲಿ ಕಾರ್ಮಿಕರಾಗಿ ತೋಟದ ಕೆಲಸ ಮಾಡಿ ಕುಟುಂಬವನ್ನು ನಿರ್ವಹಿಸುತ್ತಿದ್ದಾರೆ.

ಸರ್ಕಾರದಿಂದ ಪ್ರೋತ್ಸಾಹಕ್ಕೆ ಒತ್ತಾಯ: ಇಂತಹ ಅಪರೂಪದ ಸಾಹಸ ಪ್ರದರ್ಶಿಸಿದ ನಂದನ್ಗೆ ರಾಜ್ಯ ಸರ್ಕಾರ ವಿಶೇಷ ಪ್ರಶಸ್ತಿ, ಶಿಕ್ಷಣ ಸಹಾಯಧನ ಹಾಗೂ ಸಾರ್ವಜನಿಕ ಗೌರವ ನೀಡಿ ಪ್ರೋತ್ಸಾಹಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ನನಗೆ ಏಕಾಏಕಿ ಫಿಟ್ಸ್ ಬಂದು ಏನಾಯಿತು ಎಂಬುದು ಗೊತ್ತಾಗಲಿಲ್ಲ. ನಂತರ ಗ್ರಾಮಸ್ಥರು ನನ್ನನ್ನು ರಕ್ಷಿಸಿದ್ದಾರೆ ಎಂದು ತಿಳಿಯಿತು. ನನ್ನ ಮಗ ನಂದನ್ ಸಮಯಪ್ರಜ್ಞೆಯಿಂದ ನಡೆದುಕೊಂಡಿರಲಿಲ್ಲ ಅಂದರೆ ಇಂದು ನಾನು ಬದುಕಿರುತ್ತಿರಲಿಲ್ಲ. ಅವನ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ. ನಮ್ಮ ನೆರವಿಗೆ ಬಂದ ಎಲ್ಲ ಗ್ರಾಮಸ್ಥರಿಗೂ ನಾನು ಕೃತಜ್ಞನಾಗಿದ್ದೇನೆ. - ಚಂದ್ರು ಸಿ, ಬಾಲಕನ ತಂದೆ














Leave a Reply