ಹೊಸನಗರ: ಶಿವಮೊಗ್ಗ ಜಿಲ್ಲೆಯ ಗೃಹರಕ್ಷಕ ದಳದಲ್ಲಿ ಸುಮಾರು 15 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಹೊಸನಗರ ತಾಲೂಕಿನ ಆದಿವಾಸಿ (ಎಸ್.ಟಿ) ಸಮುದಾಯಕ್ಕೆ ಸೇರಿದ ಮಹೇಶ್ವರಪ್ಪ ಎನ್ (ಮದಕರಿ) ಅವರ ಮೇಲೆ ಜಿಲ್ಲಾ ಗೃಹರಕ್ಷಕ ದಳದ ಕಮಾಂಡೆಂಟ್ ಚೇತನ್ ಕುಮಾರ್ ಅವರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಜಿಲ್ಲಾ ಆದಿವಾಸಿ ಹಸಲರು ಕ್ಷೇಮಾಭಿವೃದ್ಧಿ ಸಂಘದಿಂದ ಹೊಸನಗರದಲ್ಲಿ ಖಂಡನೆ ವ್ಯಕ್ತಪಡಿಸಲಾಯಿತು.
ಸಂಘದ ಜಿಲ್ಲಾ ಅಧ್ಯಕ್ಷ ಎಂ.ಸಿ. ಮಲ್ಲೇಶಪ್ಪ ಮಾತನಾಡಿ, ದಿನಾಂಕ 06-03-2026 ರಂದು ಮಹೇಶ್ವರಪ್ಪ ಎನ್ ಅವರನ್ನು ಕರ್ತವ್ಯ ನಿಮಿತ್ತ ಶಿವಮೊಗ್ಗಕ್ಕೆ ಕರೆಯಿಸಿಕೊಂಡು ಮಾತಿನ ಸಂಧರ್ಭದಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೆನ್ನೆ ಮತ್ತು ಕಿವಿ ಭಾಗಕ್ಕೆ ಬಲವಾಗಿ ಹೊಡೆದಿದ್ದಾರೆ ಎಂದು ಆರೋಪಿಸಿದರು. ಅಲ್ಲದೆ “ನಿನ್ನ ತಾಕತ್ತಿದ್ದರೆ ಏನಾದರೂ ಮಾಡು, ನಿನ್ನನ್ನು ಕೆಲಸದಿಂದ ತೆಗೆದುಹಾಕುವುದು ನನ್ನ ಗುರಿ” ಎಂದು ಧಮ್ಕಿ ನೀಡಿದರೆಂದು ತಿಳಿಸಿದರು.
ಈ ಹಲ್ಲೆಯಿಂದ ಗಾಯಗೊಂಡ ಮಹೇಶ್ವರಪ್ಪ ಅವರನ್ನು ಹೊಸನಗರ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಂತರದ ಕ್ರಮವಾಗಿ ಪ್ರಕರಣದ ಸಂಬಂಧ ಮಾಹಿತಿ ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆಗೆ ಕಳುಹಿಸಲಾಗಿದೆ. ನಂತರ ದಫೇದಾರ್ ರುದ್ರೇಶ್ ಆಸ್ಪತ್ರೆಗೆ ಭೇಟಿ ನೀಡಿ ಮಹೇಶ್ವರಪ್ಪ ಅವರ ಹೇಳಿಕೆ ಪಡೆದುಕೊಂಡಿದ್ದಾರೆ ಎಂದು ತಿಳಿಸಿದರು.
ಈ ಕುರಿತು ಡಿವೈಎಸ್ಪಿ ಅವರಿಗೆ ಮಾಹಿತಿ ನೀಡಿದರೂ ಪ್ರಕರಣ ದಾಖಲಿಸಲು ಸಿಸಿ ಕ್ಯಾಮೆರಾ ದೃಶ್ಯ ಅಥವಾ ಸರ್ಕಾರಿ ನೌಕರರ ಸಾಕ್ಷಿ ಬೇಕು ಎಂದು ಹೇಳಿ ಎಫ್‌ಐಆರ್ ದಾಖಲಿಸಲು ನಿರಾಕರಿಸಲಾಗಿದೆ ಎಂದು ಸಂಘದವರು ಆರೋಪಿಸಿದರು.
ಜಾತಿ ನಿಂದನೆ, ದೈಹಿಕ ಹಲ್ಲೆ ಹಾಗೂ ದುರ್ವರ್ತನೆ ನಡೆಸಿದ ಕಮಾಂಡೆಂಟ್ ಚೇತನ್ ಕುಮಾರ್ ಅವರ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಹೋರಾಟ ಅನಿವಾರ್ಯವಾಗುತ್ತದೆ ಎಂದು ಸಂಘದ ಮುಖಂಡರು ಎಚ್ಚರಿಸಿದರು.
ಹೊಸನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಅಧ್ಯಕ್ಷ ಎಂ.ಸಿ. ಮಲ್ಲೇಶಪ್ಪ, ಜಿಲ್ಲಾ ಉಪಾಧ್ಯಕ್ಷ ಹೆಚ್.ಜಿ. ಶಿವಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವೇಶ್ ಹೆಚ್.ಎನ್., ದೇವಪ್ಪ ಮಳೂರು, ತಾಲೂಕು ಅಧ್ಯಕ್ಷ ಯೋಗೇಂದ್ರಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.














Leave a Reply