ಶಿಕಾರಿಪುರ: ಹೊಸನಗರದ ಸಮೀಪದ ಅರತಾಳುವಿನಲ್ಲಿ ಗೋ ಕಳ್ಳರನ್ನು ಹಿಡಿಯಲು ಬೆನ್ನಟ್ಟಿದ ಸಂದರ್ಭದಲ್ಲಿ ನಡೆದ ಹಲ್ಲೆ ಘಟನೆ ಖಂಡಿಸಿ ಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ ಕರೆ ನೀಡಿದ್ದ ಶಿಕಾರಿಪುರ ಬಂದ್ ಯಶಸ್ವಿಯಾಗಿ ನಡೆಯಿತು.
ಇಂದು ಬೆಳಗ್ಗಿನಿಂದಲೇ ಸಾರ್ವಜನಿಕರು ಸ್ವಯಂಪ್ರೇರಿತವಾಗಿ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಿದ್ದು, ಪಟ್ಟಣದಲ್ಲಿ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಶಾಲಾ-ಕಾಲೇಜುಗಳು, ವಾಹನ ಸಂಚಾರ ಹಾಗೂ ಮೆಡಿಕಲ್ ಶಾಪ್‌ಗಳು ಎಂದಿನಂತೆ ಕಾರ್ಯನಿರ್ವಹಿಸಿದವು.
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ರಾಜ್ಯದಲ್ಲಿ ಇತ್ತೀಚೆಗೆ ಗೋ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿವೆ. ಆದರೆ ಈ ಬಗ್ಗೆ ಕ್ರಮ ಕೈಗೊಳ್ಳಬೇಕಾದ ಸರ್ಕಾರ ನಿದ್ರಿಸುತ್ತಿದೆ ಎಂದು ಆರೋಪಿಸಿದರು. ಗೋ ಕಳ್ಳರನ್ನು ಹಿಡಿಯಲು ಬೆನ್ನಟ್ಟಿದ ಬಜರಂಗದಳದ ಕಾರ್ಯಕರ್ತರ ಮೇಲೆ ಹಲ್ಲೆ ನಡೆದಿರುವುದನ್ನು ಖಂಡಿಸಿದರು.
ಗೋವು ಮತ್ತು ಸಂಸ್ಕೃತಿಯ ರಕ್ಷಣೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ಗೋ ರಕ್ಷಕರ ಮೇಲೆ ನಡೆಯುತ್ತಿರುವ ಇಂತಹ ದಾಳಿಗಳನ್ನು ಖಂಡಿಸಬೇಕು. ಘಟನೆಯಲ್ಲಿ ಭಾಗಿಯಾದ ದುಷ್ಕರ್ಮಿಗಳ ವಿರುದ್ಧ ಪೊಲೀಸರು ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಸಮಾಜಘಾತುಕ ಶಕ್ತಿಗಳನ್ನು ಮಟ್ಟಹಾಕಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಗೋ ಕಳ್ಳರನ್ನು ಶೀಘ್ರ ಪತ್ತೆಹಚ್ಚಿ ಬಂಧಿಸಿ, ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪೊಲೀಸ್ ಇಲಾಖೆಗೆ ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ಶಿವಮೊಗ್ಗ, ಸಾಗರ, ಸೊರಬ, ಶಿರಾಳಕೊಪ್ಪ, ಶಿಕಾರಿಪುರ, ಹೊಸನಗರ ಸೇರಿದಂತೆ ವಿವಿಧ ಭಾಗಗಳಿಂದ ಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್‌ನ ಅನೇಕ ಹಿಂದೂ ಕಾರ್ಯಕರ್ತರು ಭಾಗವಹಿಸಿ ಗೋ ಕಳ್ಳತನದ ವಿರುದ್ಧ ಧಿಕ್ಕಾರ ಕೂಗಿದರು.
ಪ್ರತಿಭಟನಾ ವೇಳೆ ಸಂಸದ ಬಿ.ವೈ. ರಾಘವೇಂದ್ರ ಅವರು ಪೊಲೀಸರಿಗೆ ಮನವಿ ಸಲ್ಲಿಸಿ, ಗೋ ಸಾಗಾಣಿಕೆ ಪ್ರಕರಣದಲ್ಲಿ ಬಂಧನವಾಗಬೇಕಿರುವ ಆರೋಪಿಗಳನ್ನು ಶೀಘ್ರ ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಶಿಕಾರಿಪುರ ಪಟ್ಟಣದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಬಿಗಿ ಬಂದೋಬಸ್ತ್ ಮುಂದುವರಿಸಲಾಗಿದೆ.

















Leave a Reply