ರಿಪ್ಪನ್‌ಪೇಟೆ: ಪ್ರವಾದಿ ಹಜರತ್ ಮುಹಮ್ಮದ್ ಅವರ ಜನ್ಮದಿನದ ಅಂಗವಾಗಿ ಪಟ್ಟಣದಲ್ಲಿ ಸೆಪ್ಟೆಂಬರ್ 3ರಿಂದ 6ರವರೆಗೆ ನಡೆಯಲಿರುವ ಈದ್ ಮಿಲಾದ್ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಗುರುವಾರ ಸಂಭ್ರಮದ ಚಾಲನೆ ದೊರೆಯಿತು.
ಈದ್ ಮಿಲಾದ್ ಅಂಗವಾಗಿ ಪಟ್ಟಣದ ಪ್ರಮುಖ ಬೀದಿಗಳನ್ನು ಹಸಿರು ಬಾವುಟಗಳು, ಧಾರ್ಮಿಕ ಸಂದೇಶಗಳ ಫಲಕಗಳು ಹಾಗೂ ಅಲಂಕಾರಗಳಿಂದ ಸಿಂಗರಿಸಲಾಗಿದ್ದು, ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.
ಕಾರ್ಯಕ್ರಮದ ಅಂಗವಾಗಿ ಜುಮ್ಮಾ ಮಸೀದಿಯಿಂದ ಆರಂಭವಾದ ಬೈಕ್ ರ‍್ಯಾಲಿಯಲ್ಲಿ ನೂರಾರು ಯುವಕರು ಭಾಗವಹಿಸಿದರು. ರ‍್ಯಾಲಿಯು ಹೊಸನಗರ ರಸ್ತೆಯಿಂದ ತೀರ್ಥಹಳ್ಳಿ ರಸ್ತೆಯ ಗಾಜಿನಗೋಡು ಮಾರ್ಗವಾಗಿ, ವಿನಾಯಕ ವೃತ್ತದ ಮೂಲಕ ಸಾಗರ ರಸ್ತೆಯ ಈದ್ಗಾ ಮೈದಾನ ತಲುಪಿ, ಬಳಿಕ ಜುಮ್ಮಾ ಮಸೀದಿಯಲ್ಲಿ ಸಮಾಪ್ತಿಗೊಂಡಿತು.
ರ‍್ಯಾಲಿ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಸಿಪಿ ಐ ಗೌಡಪ್ಪ ಗೌಡರ್ ಅವರ ನೇತೃತ್ವದಲ್ಲಿ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ಏರ್ಪಡಿಸಿತ್ತು. ವಿವಿಧ ಸಂಘ-ಸಂಸ್ಥೆಗಳ ಹಾಗೂ ಸಮುದಾಯಗಳ ಮುಖಂಡರು ಮುಸ್ಲಿಂ ಬಾಂಧವರಿಗೆ ಈದ್ ಮಿಲಾದ್ ಹಬ್ಬದ ಶುಭಾಶಯಗಳನ್ನು ತಿಳಿಸಿದರು.
ಮೂರು ದಿನಗಳ ಕಾರ್ಯಕ್ರಮದಲ್ಲಿ ಧಾರ್ಮಿಕ ಪ್ರವಚನ, ಪ್ರಾರ್ಥನೆ ಹಾಗೂ ಶಾಂತಿ, ಸೌಹಾರ್ದ ಮತ್ತು ಸಹೋದರತ್ವದ ಸಂದೇಶ ಸಾರುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಸಂಘಟಕರು ತಿಳಿಸಿದ್ದಾರೆ.

















Leave a Reply