ರಿಪ್ಪನ್ ಪೇಟೆ: ಶ್ರದ್ಧಾ-ಭಕ್ತಿಯಿಂದ ಪಾದಯಾತ್ರೆ ಕೈಗೊಂಡ ಐನಾಪುರ, ಅಥಣಿ, ಶಿರಹಟ್ಟಿ ಹಾಗೂ ಶೇಡಬಾಳ ಭಾಗದ ಸುಮಾರು 150 ಜೈನ ಶ್ರಾವಕರು ಪುಣ್ಯಕ್ಷೇತ್ರ ಹೊಂಬುಜಕ್ಕೆ ಆಗಮಿಸಿ ಶ್ರೀ ಪಾರ್ಶ್ವನಾಥ ಸ್ವಾಮಿ ಹಾಗೂ ಅಭೀಷ್ಟವರಪ್ರದಾಯಿನಿ ಶ್ರೀ ಪದ್ಮಾವತಿ ದೇವಿಯ ದರ್ಶನ ಪಡೆದರು.
ಭಕ್ತರನ್ನು ಹೊಂಬುಜ ಜೈನ ಮಠದ ವತಿಯಿಂದ ಆತ್ಮೀಯವಾಗಿ ಸ್ವಾಗತಿಸಲಾಯಿತು. ಯಾತ್ರಿಕರು ನಾಲ್ಕನೇ ಶುಕ್ರವಾರದ ವಿಶೇಷ ಪೂಜೆ ಹಾಗೂ ಅನ್ನಸಂತರ್ಪಣೆ ಸೇವೆಯನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ಆಶೀರ್ವಚನ ನೀಡಿ, “ಶ್ರದ್ಧಾ ಪೂರ್ವಕ ಪಾದಯಾತ್ರೆಯಿಂದ ಧರ್ಮಸ್ಪರ್ಶ ಉಂಟಾಗಿ ಆತ್ಮೋನ್ನತಿ ಸಾಧ್ಯವಾಗುತ್ತದೆ. ನಿತ್ಯ ಸ್ತೋತ್ರ ಪಠಣ, ಸ್ವಾಧ್ಯಾಯ ಹಾಗೂ ಕ್ಷೇತ್ರ ದರ್ಶನದಿಂದ ಮಾನಸಿಕ ಕ್ಲೇಶಗಳು ದೂರವಾಗಿ ಸದೃಢ ಸಮಾಜ ನಿರ್ಮಾಣವಾಗುತ್ತದೆ” ಎಂದು ಹೇಳಿದರು.
ಕಳೆದ 14 ವರ್ಷಗಳಿಂದ ಸಮಾಜ ಜಾಗೃತಿಯ ಆಶಯದೊಂದಿಗೆ ಈ ಪಾದಯಾತ್ರೆ ನಿರಂತರವಾಗಿ ನಡೆಯುತ್ತಿದ್ದು, ಭಕ್ತರು ಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ಸಿರಿಧಾನ್ಯ, ನವಧಾನ್ಯ ಹಾಗೂ ಸವಿ ನೈವೇದ್ಯ ಅರ್ಪಿಸಿದರು. ಐನಾಪುರ, ಶಿರಹಟ್ಟಿ ಹಾಗೂ ಹುಕ್ಕೇರಿ ಭಾಗದ ಭಕ್ತ ಕುಟುಂಬಗಳಿಗೆ ಶ್ರೀಗಳು ಆಶೀರ್ವಾದ ನೀಡಿದರು.

















Leave a Reply