ಹೊಸನಗರ: ರೈತರ ಹಿತಕ್ಕಾಗಿ ಸುಮಾರು 29 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಹೊಸನಗರ ಕೊಡಚಾದ್ರಿ ಅಡಿಕೆ ಸೌಹಾರ್ದ ಸಹಕಾರಿ ಸಂಘವು 2025–26ನೇ ಸಾಲಿನಲ್ಲಿ ₹10,69,831 ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಎಚ್.ಎಂ. ರಾಘವೇಂದ್ರ ತಿಳಿಸಿದರು.
ನಗರದ ಗಾಯತ್ರಿ ಮಂದಿರದಲ್ಲಿ ನಡೆದ ವಾರ್ಷಿಕ ಸರ್ವಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಘವು 20ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ್ದು, ಆರಂಭದಿಂದಲೂ ಸದಸ್ಯರಿಗೆ ವಿವಿಧ ಸೌಲಭ್ಯಗಳೊಂದಿಗೆ ನಿರಂತರ ಲಾಭದಾಯಕವಾಗಿ ಮುನ್ನಡೆಯುತ್ತಿದೆ ಎಂದರು.
ಪ್ರಸ್ತುತ ಸಂಘದಲ್ಲಿ 5,926 ಸಕ್ರಿಯ ಸದಸ್ಯರು ಇದ್ದು, ಸದಸ್ಯರಿಗೆ ₹23.85 ಕೋಟಿ ವಿವಿಧ ಸಾಲ, ₹25.35 ಕೋಟಿ ಠೇವಣಿ, ₹3.18 ಕೋಟಿ ಷೇರು ಬಂಡವಾಳ ಹಾಗೂ ₹3.27 ಕೋಟಿ ವಿವಿಧ ನಿಧಿಗಳು ಇವೆ ಎಂದು ವಿವರಿಸಿದರು. ಡಿಸಿಸಿ ಬ್ಯಾಂಕ್‌ನಲ್ಲಿ ₹2.24 ಕೋಟಿ ಆರ್‌ಎಫ್‌ಡಿ ಹೂಡಿಕೆ ಮಾಡಲಾಗಿದೆ ಎಂದರು.
2025–26ನೇ ಸಾಲಿನಲ್ಲಿ ಸಂಘಕ್ಕೆ 34,056 ಅಡಿಕೆ ಮೂಟೆಗಳ ವಹಿವಾಟು ನಡೆದಿದ್ದು, ಅಡಿಕೆ ಇಳುವರಿ ಕುಸಿತದ ನಡುವೆಯೂ ಉತ್ತಮ ವ್ಯವಹಾರ ದಾಖಲಿಸಲಾಗಿದೆ ಎಂದು ಹೇಳಿದರು.
ಈ ವರ್ಷದಿಂದ ತೋಟಗಾರಿಕೆ ಉತ್ಪನ್ನಗಳ ಸಂಸ್ಕರಣಾ ಘಟಕ ಹಾಗೂ ಹಸಿ ಅಡಿಕೆ ಖರೀದಿ ಯೋಜನೆ ಜಾರಿಗೆ ತರಲು ಚಿಂತನೆ ನಡೆಸಲಾಗುತ್ತಿದೆ ಎಂದರು. ಸದಸ್ಯರಿಗೆ ಅಡಿಕೆ ಮುಂಗಡ ಸಾಲಕ್ಕೆ 13%, ಬೆಳೆ ಸಾಲಕ್ಕೆ 14% ಮತ್ತು ಒಂದು ವರ್ಷ ಮೇಲ್ಪಟ್ಟ ಠೇವಣಿಗೆ 8% ಬಡ್ಡಿದರ ನೀಡಲಾಗುತ್ತದೆ. ಕೃಷಿ ಅಪಘಾತ ಪರಿಹಾರ ಯೋಜನೆಯಡಿ ಗರಿಷ್ಠ ₹50,000 ವೈದ್ಯಕೀಯ ನೆರವು ಒದಗಿಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಹೊಸನಗರ ತಾಲ್ಲೂಕಿನ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿ-ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಯಿತು. ಕಾರ್ಯನಿರ್ವಹಣಾಧಿಕಾರಿ ವಿಜಯೇಂದ್ರ, ಉಪಾಧ್ಯಕ್ಷ ವಸವೆ ಈಶ್ವರಪ್ಪ ಗೌಡ, ಹನಿಯ ರವಿ ಸೇರಿದಂತೆ ನಿರ್ದೇಶಕರು ಹಾಗೂ ಸದಸ್ಯರು ಉಪಸ್ಥಿತರಿದ್ದರು.

















Leave a Reply