ಮ್ಯಾಮ್‌ಕೋಸ್‌ಗೆ ₹9.52 ಕೋಟಿ ನಿವ್ವಳ ಲಾಭ; ₹1,636 ಕೋಟಿ ವಹಿವಾಟು: ಉಪಾಧ್ಯಕ್ಷ ಮಹೇಶ್ ಹುಲ್ಕುಳಿ

Add a heading 20260723 204105 0000 ಮ್ಯಾಮ್‌ಕೋಸ್‌ಗೆ ₹9.52 ಕೋಟಿ ನಿವ್ವಳ ಲಾಭ; ₹1,636 ಕೋಟಿ ವಹಿವಾಟು: ಉಪಾಧ್ಯಕ್ಷ ಮಹೇಶ್ ಹುಲ್ಕುಳಿ
Spread the love

ಹೊಸನಗರ: ಲೆನಾಡು ಅಡಿಕೆ ಮಾರಾಟದ ಸಹಕಾರಿ ಸಂಘ (ಮ್ಯಾಮ್‌ಕೋಸ್) 2025–26ನೇ ಸಾಲಿನಲ್ಲಿ ₹9.52 ಕೋಟಿ ನಿವ್ವಳ ಲಾಭ ಗಳಿಸಿದ್ದು, ಸುಮಾರು ₹1,636 ಕೋಟಿ ವಹಿವಾಟು ನಡೆಸಿದೆ ಎಂದು ಜಿಲ್ಲಾ ಮಲೆನಾಡು ಅಡಿಕೆ ಮಾರಾಟ ಸಹಕಾರ ಸಂಘದ ಉಪಾಧ್ಯಕ್ಷ ಮಹೇಶ್ ಹುಲ್ಕುಳಿ ತಿಳಿಸಿದರು.

  ಹೊಸನಗರದ ಚೌಡಮ್ಮ ರಸ್ತೆಯಲ್ಲಿರುವ ಮಾಮ್‌ಕೋಸ್ ಸ್ವಂತ ಕಟ್ಟಡದಲ್ಲಿ ನಡೆದ ಶೇರುದಾರರ ಸಭೆಯಲ್ಲಿ ಮಾತನಾಡಿದ ಅವರು, ಅಡಿಕೆ ಬೆಳೆಗಾರರ ಹಿತಾಸಕ್ತಿಯನ್ನು ಕಾಪಾಡುವ ಉದ್ದೇಶದಿಂದ 1939ರಲ್ಲಿ ಆರಂಭವಾದ ಈ ಸಂಸ್ಥೆ ಇಂದು ಆರ್ಥಿಕವಾಗಿ ಸದೃಢವಾಗಿ ಬೆಳೆಯುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಸ್ಥಾಪನೆಯ ಸಂದರ್ಭದಲ್ಲಿ ಕೇವಲ 629 ಸದಸ್ಯರು, 5,121 ಅಡಿಕೆ ಮೂಟೆಗಳ ವಹಿವಾಟು ಹಾಗೂ ₹16,031 ಶೇರು ಬಂಡವಾಳದೊಂದಿಗೆ ಆರಂಭಗೊಂಡ ಸಂಸ್ಥೆ, ಮೊದಲ ವರ್ಷವೇ ಲಾಭ ಗಳಿಸಿ ಶೇ.6.25 ಡಿವಿಡೆಂಡ್ ನೀಡಿತ್ತು. ಪ್ರಸ್ತುತ 31,850 ಸದಸ್ಯರನ್ನು ಹೊಂದಿರುವ ಸಂಸ್ಥೆ ಆರಂಭದಿಂದಲೂ ನಿರಂತರ ಲಾಭದಲ್ಲೇ ಕಾರ್ಯನಿರ್ವಹಿಸುತ್ತಾ ಪ್ರತಿವರ್ಷ ಡಿವಿಡೆಂಡ್ ನೀಡುತ್ತಿರುವುದು ವಿಶೇಷ ಎಂದು ಹೇಳಿದರು.
ಸಂಸ್ಥೆಯ ಆಡಳಿತ ವ್ಯಾಪ್ತಿಯಲ್ಲಿ ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ಎಲ್ಲಾ ತಾಲ್ಲೂಕುಗಳು, ದಾವಣಗೆರೆ ಜಿಲ್ಲೆಯ ಚನ್ನಗಿರಿ, ಹೊನ್ನಾಳಿ ಮತ್ತು ನ್ಯಾಮತಿ ಸೇರಿದಂತೆ ಒಟ್ಟು 17 ತಾಲ್ಲೂಕುಗಳು ಸೇರಿವೆ ಎಂದು ತಿಳಿಸಿದರು.

ಹೆಚ್ಚಿದ ವ್ಯವಹಾರ 2025–26ನೇ ಸಾಲಿನಲ್ಲಿ ಸಂಸ್ಥೆಯ ಒಟ್ಟು ವಹಿವಾಟು ಸುಮಾರು ₹1,636 ಕೋಟಿಯಾಗಿದ್ದು, ಕಳೆದ ಸಾಲಿಗೆ ಹೋಲಿಸಿದರೆ ₹338.62 ಕೋಟಿ ಹೆಚ್ಚಳವಾಗಿದೆ. ಇದೇ ಅವಧಿಯಲ್ಲಿ ₹9.52 ಕೋಟಿ ನಿವ್ವಳ ಲಾಭ ಗಳಿಸಲಾಗಿದೆ ಎಂದು ವಿವರಿಸಿದರು.

ರೈತರಿಗೆ ವಿವಿಧ ಸಾಲ ಸೌಲಭ್ಯ: ಸಂಸ್ಥೆಯಿಂದ ಅಡಿಕೆ ಆಧಾರ ಸಾಲ, ಕಟಾವು ಸಾಲ ಹಾಗೂ ಕೊಳೆ ಔಷಧಿ ಸಾಲ ಸೇರಿದಂತೆ ಹಲವು ರೀತಿಯ ಸಾಲ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಅಡಿಕೆ ಆಧಾರ ಸಾಲದಲ್ಲಿ ಶೇ.60ರಷ್ಟು ಮುಂಗಡ ಪಾವತಿ ಹಾಗೂ ಶೇ.11.50 ಬಡ್ಡಿದರದಲ್ಲಿ ಸಾಲ ನೀಡಲಾಗುತ್ತದೆ. ಕಟಾವು ಸಾಲವನ್ನು ಪ್ರತಿ ಗುಂಟೆಗೆ ₹2,000ರಂತೆ ಗರಿಷ್ಠ ₹2 ಲಕ್ಷದವರೆಗೆ ಕ್ರೆಡಿಟ್ ಕಾರ್ಡ್ ಮೂಲಕ ಪಡೆಯಬಹುದು. ಕೊಳೆ ಔಷಧಿ ಸಾಲವನ್ನು ಪ್ರತಿ ಗುಂಟೆಗೆ ₹300ರಂತೆ ಗರಿಷ್ಠ ₹50 ಸಾವಿರ ಹಾಗೂ ವಿಶೇಷವಾಗಿ ಕೊಳೆ ಔಷಧಿ ಸಾಲವನ್ನೇ ಪಡೆಯುವವರಿಗೆ ಪ್ರತಿ ಗುಂಟೆಗೆ ₹500ರಂತೆ ₹80 ಸಾವಿರದವರೆಗೆ ನೀಡಲಾಗುತ್ತದೆ ಎಂದು ತಿಳಿಸಿದರು.

ಗುಂಪು ವಿಮಾ ಯೋಜನೆ: ಸದಸ್ಯರ ಹಿತದೃಷ್ಟಿಯಿಂದ ಜಾರಿಗೊಳಿಸಿರುವ ಗುಂಪು ವಿಮಾ ಅಭಿರಕ್ಷೆ ಯೋಜನೆಯಡಿ ಸದಸ್ಯರು, ಅವರ ಕುಟುಂಬದವರು ಹಾಗೂ ನೋಂದಾಯಿತ ಕೂಲಿ ಕಾರ್ಮಿಕರಿಗೆ ವಿಮಾ ಸೌಲಭ್ಯ ಕಲ್ಪಿಸಲಾಗಿದೆ. ಮೃತರ ಪರಿಹಾರ ಮೊತ್ತವನ್ನು ₹6 ಲಕ್ಷದಿಂದ ₹7 ಲಕ್ಷಕ್ಕೆ ಹಾಗೂ ಆಸ್ಪತ್ರೆ ಚಿಕಿತ್ಸಾ ವೆಚ್ಚವನ್ನು ₹1.50 ಲಕ್ಷದಿಂದ ₹2 ಲಕ್ಷಕ್ಕೆ ಹೆಚ್ಚಿಸಲಾಗಿದೆ. 2025–26ನೇ ಸಾಲಿನಲ್ಲಿ ಈ ಯೋಜನೆಯಡಿ 76 ಪ್ರಕರಣಗಳಿಗೆ ಒಟ್ಟು ₹77.78 ಲಕ್ಷ ಪರಿಹಾರ ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ವ್ಯವಸ್ಥಾಪಕ ನಿರ್ದೇಶಕ ಶ್ರೀಕಾಂತ ಬರುವೆ, ನಿರ್ದೇಶಕರಾದ ಕೆ.ವಿ. ಕೃಷ್ಣಮೂರ್ತಿ, ಧರ್ಮೇಂದ್ರ ಹೆಚ್., ನಂದನ್ ಹೆಚ್.ಸಿ., ಕುಬೇಂದ್ರಪ್ಪ ಎಂ., ರತ್ನಾಕರ್ ಕೆ., ಸತೀಶ್ ಎನ್., ರಮೇಶ್ ಟಿ.ಎಲ್., ವಿರೇಶ್ ಯು.ವಿ., ಸುಬ್ರಹ್ಮಣ್ಯ ವೈ.ಎಸ್., ಬಮ್ಮಪ್ಪ, ವಿವಿಧ ಶಾಖೆಗಳ ವ್ಯವಸ್ಥಾಪಕರು ಹಾಗೂ ಶೇರುದಾರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *