ಹೊಸನಗರ: ಮಲೆನಾಡಿನ ಜನರಿಗೆ ಮರಣ ಶಾಸನವಾಗಲಿರುವ ಕಸ್ತೂರಿರಂಗನ್ ವರದಿಯನ್ನು ಕಳೆದ 13 ವರ್ಷಗಳಿಂದ ನಿರಂತರವಾಗಿ ವಿರೋಧಿಸುತ್ತಿದ್ದರೂ ಅದು ಇನ್ನೂ ಜೀವಂತವಾಗಿಯೇ ಉಳಿದಿದೆ ಎಂದು ಯೂನಿಯನ್ ಬ್ಯಾಂಕ್ ಅಧ್ಯಕ್ಷ ವಾಟ್ಗೋಡು ಸುರೇಶ್ ಹೇಳಿದರು.
ಹೊಸನಗರದ ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಆಗಸ್ಟ್ 29ರಂದು ನಡೆಯಲಿರುವ ಕಸ್ತೂರಿರಂಗನ್ ವಿರೋಧಿ ಪಾದಯಾತ್ರೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪಶ್ಚಿಮಘಟ್ಟ ರೈತ ಸಹಕಾರಿ ವೇದಿಕೆ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಮಂಜುನಾಥ ಗೌಡ ಅವರ ನೇತೃತ್ವದಲ್ಲಿ ಕಾರಣಗಿರಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಿಂದ ಹೊಸನಗರದವರೆಗೆ ಬೃಹತ್ ಪಾದಯಾತ್ರೆ ಮತ್ತು ಪ್ರತಿಭಟನೆ ಆಯೋಜಿಸಲಾಗಿದೆ ಎಂದು ತಿಳಿಸಿದರು.
ರಾಜ್ಯದ 21,000 ಚದರ ಕಿ.ಮೀ. ವ್ಯಾಪ್ತಿಯ 1,449 ಗ್ರಾಮಗಳನ್ನು ಪರಿಸರ ಸೂಕ್ಷ್ಮ ವಲಯವೆಂದು ಘೋಷಿಸಲು ಕೇಂದ್ರ ಸರ್ಕಾರ 7ನೇ ಕರಡು ಅಧಿಸೂಚನೆ ಹೊರಡಿಸಿದ್ದು, ಇದು ಜಾರಿಯಾದರೆ ಘೋಷಿತ ಗ್ರಾಮಗಳ ಜನಜೀವನಕ್ಕೆ ತೀವ್ರ ಸಂಕಷ್ಟ ಉಂಟಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
“ಈ ಹೋರಾಟ ಯಾವುದೇ ರಾಜಕೀಯ ಪಕ್ಷದದ್ದಲ್ಲ. ಜನರ ಶಕ್ತಿಯಿಂದ ಆಡಳಿತಗಾರರೇ ನಮ್ಮ ಬಳಿಗೆ ಬರುವ ವಾತಾವರಣ ನಿರ್ಮಾಣವಾಗಬೇಕು. ಅದಕ್ಕಾಗಿ ಆಗಸ್ಟ್ 29ರ ಪಾದಯಾತ್ರೆಯಲ್ಲಿ ಎಲ್ಲರೂ ಭಾಗವಹಿಸಬೇಕು” ಎಂದು ಕರೆ ನೀಡಿದರು.
ಸಭೆಯಲ್ಲಿ ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಎಂ.ವಿ. ಜಯರಾಮ್, ದುಮ್ಮ ವಿನಯ್ಕುಮಾರ್, ಎಂ.ಎಂ. ಪರಮೇಶ್, ಗುರುಶಕ್ತಿ ವಿದ್ಯಾದರ್, ವಾಲೆಮನೆ ನಾಗೇಶ್, ರೆಡ್ಡಿ ಶ್ರೀನಿವಾಸ್, ಸುರೇಶ್, ಪೂರ್ಣೇಶ್ ಮಲೆಬೈಲ್, ಡಿ.ವಿ.ಆರ್. ಮಲ್ಲಿಕಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.

















Leave a Reply