ಹೊಸನಗರ: ಹೊಸನಗರ ತಾಲೂಕಿನ ವ್ಯಾಪ್ತಿಯಲ್ಲಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಕೊರತೆಯಿಂದ ಹೋಟೆಲ್ ಮಾಲೀಕರು ಹೋಟೆಲ್ ಬಂದ್ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವರ್ತಕರ ಸಂಘದ ಅಧ್ಯಕ್ಷ ಪೂರ್ಣೇಶ್ ತಿಳಿಸಿದ್ದಾರೆ.
ಹೊಸನಗರ ತಾಲೂಕು ಕಚೇರಿ ಮುಂಭಾಗದಲ್ಲಿ ವರ್ತಕರ ಸಂಘ ಹಾಗೂ ಹೋಟೆಲ್ ಮಾಲೀಕರ ಸಂಘದ ವತಿಯಿಂದ ವಾಣಿಜ್ಯ ಗ್ಯಾಸ್ ಸಿಲಿಂಡರ್ ಕೊರತೆಯನ್ನು ತಕ್ಷಣ ಪರಿಹರಿಸುವಂತೆ ಸರ್ಕಾರ ಮತ್ತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಈ ಮನವಿಪತ್ರವನ್ನು ಹೊಸನಗರ ತಹಶೀಲ್ದಾರ್ ಭರತ್ ರಾಜ್ ಅವರ ಮೂಲಕ ಸರ್ಕಾರಕ್ಕೆ ಕಳುಹಿಸುವಂತೆ ವಿನಂತಿಸಲಾಯಿತು.
ವಾಣಿಜ್ಯ ಗ್ಯಾಸ್ ಸಿಲಿಂಡರ್‌ಗಳ ಕೊರತೆಯಿಂದ ಸರಬರಾಜು ಸರಿಯಾಗಿ ನಡೆಯದೆ ಹೋಟೆಲ್ ಉದ್ಯಮಕ್ಕೆ ತೀವ್ರ ತೊಂದರೆ ಉಂಟಾಗಿದೆ. ಪ್ರಧಾನಿಗಳು ಯಾವುದೇ ಕಾರಣಕ್ಕೂ ವಾಣಿಜ್ಯ ಮತ್ತು ಗೃಹ ಬಳಕೆಯ ಸಿಲಿಂಡರ್ ಕೊರತೆ ಇಲ್ಲ ಎಂದು ಘೋಷಣೆ ಮಾಡುತ್ತಿದ್ದರೂ, ಹೊಸನಗರದಲ್ಲಿ ವಾಣಿಜ್ಯ ಸಿಲಿಂಡರ್ ಸರಬರಾಜು ಸರಿಯಾಗಿ ನಡೆಯುತ್ತಿಲ್ಲ ಎಂದು ಅವರು ಆರೋಪಿಸಿದರು.
ಯುಗಾದಿ ಮತ್ತು ರಂಜಾನ್ ಹಬ್ಬದ ಸಂದರ್ಭದಲ್ಲಿಯೇ ಈ ಸಮಸ್ಯೆ ಮತ್ತಷ್ಟು ತೀವ್ರವಾಗಿದೆ. ತಕ್ಷಣವೇ ಸರಬರಾಜು ಏಜೆನ್ಸಿಗಳನ್ನು ಕರೆಸಿ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಂಡು ನಿರಂತರವಾಗಿ ಗ್ಯಾಸ್ ಸರಬರಾಜು ಆಗುವಂತೆ ಸರ್ಕಾರ ಹಾಗೂ ಶಿವಮೊಗ್ಗ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಹೋಟೆಲ್ ಮಾಲೀಕರು ಶ್ರೀಮಂತರಲ್ಲ: ಉದಯಕುಮಾರ್ ಶೆಟ್ಟಿ
ಹೊಸನಗರ ಪಟ್ಟಣದಲ್ಲಿ ಹೋಟೆಲ್ ಉದ್ಯಮ ನಡೆಸುವವರು ಶ್ರೀಮಂತರಲ್ಲ. ಒಂದು ದಿನ ಹೋಟೆಲ್ ಬಂದ್ ಮಾಡಿದರೂ ಮಾಲೀಕರು ಹಾಗೂ ಕೆಲಸ ಮಾಡುವವರು ಬೀದಿಗೆ ಬರುವ ಪರಿಸ್ಥಿತಿ ಉಂಟಾಗುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ವಾಣಿಜ್ಯ ಗ್ಯಾಸ್ ಸಿಲಿಂಡರ್ ಕೊರತೆಯನ್ನು ಹೋಟೆಲ್ ಮಾಲೀಕರಿಗೆ ಉಂಟುಮಾಡಬಾರದು ಎಂದು ಅಧಿಕಾರಿಗಳಲ್ಲಿ ಮನವಿ ಮಾಡಿದರು ಎಂದು ಉದಯಕುಮಾರ್ ಶೆಟ್ಟಿ ಹೇಳಿದರು.
ಮನವಿ ಸಲ್ಲಿಸುವ ವೇಳೆ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನರೇಂದ್ರಕುಮಾರ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಹರೀಶ್, ಸಾಗರ–ಹೊಸನಗರ ಹೋಟೆಲ್ ಮಾಲೀಕರ ಸಂಘದ ನಿರ್ದೇಶಕ ನಿಖಿಲ್ ಪ್ರಭಾಕರ್, ಸ್ವಂದನ್ ಬಿ.ಎಸ್. ಸುರೇಶ್, ವರ್ತಕರ ಸಂಘದ ನಿಕಟಪೂರ್ವ ಅಧ್ಯಕ್ಷ ವಿಜಯೇಂದ್ರ ಶೆಟ್ಟಿ, ಸಂತೋಷ್ ಹೋಟೆಲ್ ರವಿ, ಸಂತೋಷ್, ಮಾವಿನಕೊಪ್ಪ ಶ್ರೀಧರ್, ಉದಯಕುಮಾರ್, ಕೃಷ್ಣಮೂರ್ತಿ ಗೋವಿಂದಣ್ಣ, ರಾಘವೇಂದ್ರ, ಭೋಜೇಗೌಡ, ನಂಜುಂಡಿ, ಅಶೋಕ್ ಹೋಟೆಲ್ ರತ್ನಾಕರ್, ಸುಭಾಷ್, ಚಂದ್ರಣ್ಣ ಮಹಾಬಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.














Leave a Reply