
ಹೊಸನಗರ: ಕಳೆದ ಎರಡು ತಿಂಗಳಿನಿಂದ ಭೂಕುಸಿತದ ಆತಂಕ ಹಿನ್ನೆಲೆಯಲ್ಲಿ ಸಂಪೂರ್ಣವಾಗಿ ಬಂದ್ ಆಗಿದ್ದ ಶಿವಮೊಗ್ಗ-ಕುಂದಾಪುರ ರಾಜ್ಯ ಹೆದ್ದಾರಿ-52ರ ಹುಲಿಕಲ್ (ಬಾಳೆಬರೆ) ಘಾಟ್ ರಸ್ತೆಯಲ್ಲಿ ಜೂನ್ 12ರಿಂದ ಲಘು ವಾಹನಗಳ ಸಂಚಾರಕ್ಕೆ ಜಿಲ್ಲಾಡಳಿತ ಅನುಮತಿ ನೀಡಿದೆ.
ಈ ಕುರಿತು ಶಿವಮೊಗ್ಗ ಜಿಲ್ಲಾ ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ. ಆದೇಶ ಹೊರಡಿಸಿದ್ದು, ಅಗತ್ಯ ದುರಸ್ತಿ ಕಾಮಗಾರಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ನಿರ್ಬಂಧವನ್ನು ಭಾಗಶಃ ತೆರವುಗೊಳಿಸಲಾಗಿದೆ.
ಕಳೆದ ಏಪ್ರಿಲ್ 9ರಂದು ಹುಲಿಕಲ್ ಘಾಟ್‌ನ ಹೇರ್‌ಪಿನ್ ತಿರುವಿನ ಬಳಿ ಕಾಮಗಾರಿ ನಡೆಯುತ್ತಿದ್ದ ವೇಳೆ ಸುಮಾರು 12 ಮೀಟರ್ ಎತ್ತರದ ಕಾಂಕ್ರೀಟ್ ರಸ್ತೆಯ ಕೆಳಭಾಗದಲ್ಲಿ ಭೂಕುಸಿತ ಸಂಭವಿಸಿತ್ತು. ಜೊತೆಗೆ ರಸ್ತೆಯ ಮೇಲ್ಭಾಗದಲ್ಲೂ ಬಿರುಕುಗಳು ಕಾಣಿಸಿಕೊಂಡಿದ್ದರಿಂದ ಸುರಕ್ಷತೆಯ ದೃಷ್ಟಿಯಿಂದ ಮಾಸ್ತಿ ಕಟ್ಟೆಯಿಂದ ಹೊಸ ಅಂಗಡಿ ತನಕ ಎಲ್ಲಾ ಮಾದರಿಯ ವಾಹನಗಳ ಸಂಚಾರವನ್ನು ಜಿಲ್ಲಾಡಳಿತ ನಿಷೇಧಿಸಿತ್ತು.
ಈ ಅವಧಿಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಚಂಡಿಕಾಂಬ ದೇವಸ್ಥಾನದ ಬಳಿ ಮೆಟ್ಟಿಲು ಮಾರ್ಗದ ಮೂಲಕ ವಾಹನಗಳ ಅದಲು-ಬದಲು ವ್ಯವಸ್ಥೆ ಕಲ್ಪಿಸಲಾಗಿತ್ತು.
ಪ್ರಸ್ತುತ ಹಾನಿಗೊಳಗಾದ ತಿರುವಿನಲ್ಲಿ ತಡೆಗೋಡೆ ನಿರ್ಮಾಣ, ಮಣ್ಣಿನ ಏರಿ ತುಂಬುವಿಕೆ ಹಾಗೂ ಲೀನ್ ಕಾಂಕ್ರೀಟ್ ಬಳಸಿ ತಾತ್ಕಾಲಿಕ ದುರಸ್ತಿ ಕಾಮಗಾರಿ ಪೂರ್ಣಗೊಂಡಿದೆ. ಲೋಕೋಪಯೋಗಿ ಇಲಾಖೆ, ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ವರದಿಗಳನ್ನು ಪರಿಶೀಲಿಸಿದ ಬಳಿಕ ಜಿಲ್ಲಾಡಳಿತ ಲಘು ವಾಹನಗಳ ಸಂಚಾರಕ್ಕೆ ಅನುಮತಿ ನೀಡಿದೆ.
ಆದರೆ, ಮಳೆಗಾಲ ಹಿನ್ನೆಲೆಯಲ್ಲಿ ಘಾಟ್ ಪ್ರದೇಶದಲ್ಲಿ ಮತ್ತೊಮ್ಮೆ ಭೂಕುಸಿತ ಸಂಭವಿಸುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ರಸ್ತೆ ಬದಿಗಳಲ್ಲಿ ತಡೆಗೋಡೆ, ಎಚ್ಚರಿಕೆ ಹಾಗೂ ಮಾಹಿತಿ ಫಲಕಗಳನ್ನು ಅಳವಡಿಸಲಾಗಿದೆ. ರಾತ್ರಿ ವೇಳೆ ಸುರಕ್ಷಿತ ಸಂಚಾರಕ್ಕಾಗಿ ‘ಕ್ಯಾಟ್ ಐ’ ಹಾಗೂ ಸೋಲಾರ್ ಸ್ಟಡ್ಸ್‌ಗಳನ್ನೂ ಅಳವಡಿಸಲಾಗಿದೆ.
ಮೋಟಾರು ವಾಹನ ಕಾಯ್ದೆ-1988ರ ಕಲಂ 115 ಮತ್ತು 116ರ ಅಡಿಯಲ್ಲಿ ವಿಧಿಸಲಾಗಿದ್ದ ಸಂಪೂರ್ಣ ಸಂಚಾರ ನಿಷೇಧವನ್ನು ಹಿಂಪಡೆದು, ಜೂನ್ 12ರಿಂದ ಹುಲಿಕಲ್ ಘಾಟ್ ರಸ್ತೆಯಲ್ಲಿ ಕೇವಲ ಲಘು ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಭಾರೀ ವಾಹನಗಳ ಸಂಚಾರದ ಕುರಿತು ಮುಂದಿನ ದಿನಗಳಲ್ಲಿ ಪರಿಸ್ಥಿತಿ ಪರಿಶೀಲಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಜಿಲ್ಲಾಡಳಿತ ತಿಳಿಸಿದೆ.














Leave a Reply