

ಶಿವಮೊಗ್ಗ: ರಾಷ್ಟ್ರೀಯ ಹೆದ್ದಾರಿ 169ಎರ ಆಗುಂಬೆ ಘಾಟಿ ಮಾರ್ಗದಲ್ಲಿ ಭಾರಿ ವಾಹನಗಳ ಸಂಚಾರವನ್ನು ಜೂನ್ 15, 2026ರಿಂದ ಮಳೆಗಾಲ ಮುಗಿಯುವವರೆಗೆ ತಾತ್ಕಾಲಿಕವಾಗಿ ನಿಷೇಧಿಸಿ ಶಿವಮೊಗ್ಗ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಆದೇಶ ಹೊರಡಿಸಿದ್ದಾರೆ.
ಹುಲಿಕಲ್ ಘಾಟಿಯಲ್ಲಿ ಸಂಭವಿಸಿರುವ ಭೂಕುಸಿತದ ಹಿನ್ನೆಲೆಯಲ್ಲಿ ಶಿವಮೊಗ್ಗ–ಹೊಸನಗರ–ಮಾಸ್ತಿಕಟ್ಟೆ ಮಾರ್ಗದ ಮೂಲಕ ಕುಂದಾಪುರ ಹಾಗೂ ಉಡುಪಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ತಾತ್ಕಾಲಿಕ ರಕ್ಷಣಾತ್ಮಕ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಇದರಿಂದಾಗಿ ಆಗುಂಬೆ ಘಾಟಿಯಲ್ಲಿ ಜಲ್ಲಿ ಹಾಗೂ ಇತರೆ ಸರಕು ಸಾಗಾಣಿಕೆ ವಾಹನಗಳ ಓಡಾಟ ಹೆಚ್ಚಾಗಿದ್ದು, ಮಳೆಗಾಲದಲ್ಲಿ ಅಪಾಯದ ಸಾಧ್ಯತೆ ಹೆಚ್ಚಿದೆ.

ಜಿಲ್ಲಾಡಳಿತದ ಮಾಹಿತಿ ಪ್ರಕಾರ, ಮುಂದಿನ ದಿನಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾದಲ್ಲಿ ಘಾಟಿಯ ವಿವಿಧ ಪ್ರದೇಶಗಳಲ್ಲಿ ರಸ್ತೆ ಬದಿಯ ಭೂಕುಸಿತ, ಅಪಘಾತಗಳು ಹಾಗೂ ಸಾರ್ವಜನಿಕ ಸಂಚಾರಕ್ಕೆ ಅಡಚಣೆ ಉಂಟಾಗುವ ಸಾಧ್ಯತೆ ಇದೆ. ಅಲ್ಲದೆ, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಹಾಗೂ ಹಾವೇರಿ ಜಿಲ್ಲೆಗಳ ಜನರು ಆರೋಗ್ಯ ಸೇರಿದಂತೆ ತುರ್ತು ಅಗತ್ಯಗಳಿಗಾಗಿ ಮಣಿಪಾಲ್, ಉಡುಪಿ ಮತ್ತು ಮಂಗಳೂರಿಗೆ ತೆರಳುವ ಸಂಪರ್ಕಕ್ಕೂ ತೊಂದರೆ ಉಂಟಾಗುವ ಆತಂಕವಿದೆ.
ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಆಗುಂಬೆ ಘಾಟಿಯಲ್ಲಿ ಭಾರಿ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.
ಪರ್ಯಾಯ ಮಾರ್ಗಗಳು
ತೀರ್ಥಹಳ್ಳಿಯಿಂದ ಉಡುಪಿ ಕಡೆಗೆ ತೆರಳುವ ಭಾರಿ ವಾಹನಗಳು:
ತೀರ್ಥಹಳ್ಳಿ – ನಗರ – ನಾಗೋಡಿ – ಕೊಲ್ಲೂರು – ಕುಂದಾಪುರ – ಉಡುಪಿ ಮಾರ್ಗ
ತೀರ್ಥಹಳ್ಳಿ – ಶೃಂಗೇರಿ – ಕೆರೆಕಟ್ಟೆ – ಬಜಗೋಳಿ – ಕಾರ್ಕಳ – ಉಡುಪಿ ಮಾರ್ಗ
ಉಡುಪಿಯಿಂದ ತೀರ್ಥಹಳ್ಳಿ ಕಡೆಗೆ ಬರುವ ಭಾರಿ ವಾಹನಗಳು:
ಉಡುಪಿ – ಕುಂದಾಪುರ – ಕೊಲ್ಲೂರು – ನಾಗೋಡಿ – ನಗರ – ತೀರ್ಥಹಳ್ಳಿ ಮಾರ್ಗ
ಉಡುಪಿ – ಕಾರ್ಕಳ – ಬಜಗೋಳಿ – ಕೆರೆಕಟ್ಟೆ – ಶೃಂಗೇರಿ – ತೀರ್ಥಹಳ್ಳಿ ಮಾರ್ಗ
ಜಿಲ್ಲಾಡಳಿತದ ಈ ಆದೇಶ ಜೂನ್ 15ರಿಂದ ಜಾರಿಗೆ ಬರಲಿದ್ದು, ಮಳೆಗಾಲ ಮುಗಿಯುವವರೆಗೆ ಅನ್ವಯವಾಗಲಿದೆ.














Leave a Reply