ಹೊಸನಗರ: ತಾಲೂಕಿನ ಮೇಲಿನಬೇಸಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೋರಗೋಡು ಗ್ರಾಮದಲ್ಲಿ 9 ವರ್ಷದ ಬಾಲಕ ನಂದನ್ ಜಿ.ಸಿ. ತನ್ನ ಸಮಯಪ್ರಜ್ಞೆ, ಧೈರ್ಯ ಮತ್ತು ಚಾಣಾಕ್ಷತನದಿಂದ ತಂದೆಯ ಜೀವ ಉಳಿಸಿದ ನಂದನ ಅನ್ನು ಗುರುತಿಸಿ ಖುದ್ದು ಸಂದರ್ಶಿಸಿ ನಾಡಿನ್ಯೂಸ್ ತಂಡ ವರದಿ ಬಿತ್ತರಿಸಿತ್ತು. ರಾಜ್ಯಾದ್ಯಂತ ಈ ಪುಟ್ಟ ಬಾಲಕನ ಧೈರ್ಯ ಸಾಹಸಕ್ಕೆ ವ್ಯಾಪಕ ಜನ ಮೆಚ್ಚುಗೆ ವ್ಯಕ್ತವಾಗಿದೆ.
ಘಟನೆಯ ಹಿನ್ನಲೆ : ನಂದನ್ ತನ್ನ ತಂದೆ ಚಂದ್ರು ಅವರೊಂದಿಗೆ ಗೋರಗೋಡು ಸಮೀಪದ ಹೊಳೆಯ ಬಳಿ ತೆರಳಿದ್ದ ವೇಳೆ, ಚಂದ್ರು ಅವರಿಗೆ ಏಕಾಏಕಿ ಫಿಟ್ಸ್ ಬಂದು ಕಾಲು ಜಾರಿ ಹೊಳೆಗೆ ಬಿದ್ದಿದ್ದಾರೆ. ಹರಿಯುವ ನೀರಿನೊಂದಿಗೆ ಅವರು ಸುಮಾರು 2 ಕಿಲೋಮೀಟರ್ ದೂರ ತೇಲಿ ಹೋಗಿದ್ದಾರೆ.


ಈ ದೃಶ್ಯ ಕಂಡ ನಂದನ್ ಗಾಬರಿಗೊಳ್ಳದೆ ಹೊಳೆಯ ದಡದ ಉದ್ದಕ್ಕೂ ಸುಮಾರು 2 ಕಿಲೋಮೀಟರ್ ಓಡಿ ತಂದೆಯನ್ನು ಹುಡುಕಿದ್ದಾನೆ. ಬಳಿಕ ಸಮೀಪದ ಮನೆಗಳಿಗೆ ಧಾವಿಸಿ ಗ್ರಾಮಸ್ಥರ ನೆರವು ಕೋರಿದ್ದಾನೆ. ಸ್ಥಳಕ್ಕೆ ಬಂದ ಗ್ರಾಮಸ್ಥರು ಹೊಳೆಯಲ್ಲಿ ತೇಲುತ್ತಿದ್ದ ಜರ್ಕಿನ್‌ನ್ನು ಗಮನಿಸಿದಾಗ, ತಂದೆ ಅದೇ ಭಾಗದಲ್ಲಿರಬಹುದೆಂದು ನಂದನ್ ತಿಳಿಸಿದ್ದಾನೆ. ತಕ್ಷಣ ಕಾರ್ಯಾಚರಣೆ ನಡೆಸಿದ ಗ್ರಾಮಸ್ಥರು ಚಂದ್ರು ಅವರನ್ನು ದಡಕ್ಕೆ ಎಳೆದು ರಕ್ಷಿಸಿ ಪ್ರಥಮ ಚಿಕಿತ್ಸೆ ನೀಡಿ ಜೀವ ಉಳಿಸಿದ್ದಾರೆ.

ತಂದೆ ಸಂಕಷ್ಟದಲ್ಲಿದ್ದ ಸಂದರ್ಭದಲ್ಲಿ ಸಮಯಪ್ರಜ್ಞೆ ಹಾಗೂ ಧೈರ್ಯದಿಂದ ನಡೆದುಕೊಂಡ ನಂದನ್ ಸಾಹಸವನ್ನು ಗುರುತಿಸಿ ಗೋರಗೋಡು ಶಾಲೆಯಲ್ಲಿ ವಿಶೇಷವಾಗಿ ಸನ್ಮಾನಿಸಲಾಯಿತು.
ಸನ್ಮಾನ ಕಾರ್ಯಕ್ರಮದಲ್ಲಿ ಹೊಸನಗರ ಕ್ಷೇತ್ರ ಶಿಕ್ಷಣಾಧಿಕಾರಿ ಗಣೇಶ್, ನೌಕರರ ಸಂಘದ ಅಧ್ಯಕ್ಷ ಸೋಮಶೇಖರ ಬಂಡಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪುಟ್ಟಸ್ವಾಮಿ ಕೆ.ಜಿ., ಕಾರ್ಯದರ್ಶಿ ಶಿವಪ್ಪ ಎಚ್.ಸಿ., ಗುರುಮೂರ್ತಿ ಹಾಗೂ ವಿ.ಡಿ. ನಾಗರಾಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ನಂದನ್ ಸಮಯಪ್ರಜ್ಞೆ, ಧೈರ್ಯ ಮತ್ತು ಸಾಹಸದಿಂದ ತನ್ನ ತಂದೆಯ ಜೀವ ಉಳಿಸಿರುವುದು ಹೆಮ್ಮೆಯ ಸಂಗತಿ. ಇಂತಹ ಅಪರೂಪದ ಸಾಹಸವನ್ನು ಗುರುತಿಸಿ, ಈ ಬಾಲಕನ ಹೆಸರನ್ನು 'ಶೌರ್ಯ ಪ್ರಶಸ್ತಿ'ಗೆ ಶಿಕ್ಷಣ ಇಲಾಖೆಯ ವತಿಯಿಂದ ಶಿಫಾರಸು ಮಾಡುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು.
- ಗಣೇಶ್ ವೈ, ಕ್ಷೇತ್ರ ಶಿಕ್ಷಣಾಧಿಕಾರಿ, ಹೊಸನಗರ















Leave a Reply