“ನಾನೂ ಐಎಎಸ್ ಆಗ್ತೀನಿ” – ಡಿಸಿ ಮುಂದೆ ವಿದ್ಯಾರ್ಥಿಗಳ ಕನಸುಗಳ ಹರಿವು
ರಿಪ್ಪನ್ ಪೇಟೆ: ಸಾರ್ವಜನಿಕ ಸೇವೆಗಳ ಗುಣಮಟ್ಟವನ್ನು ಹೆಚ್ಚಿಸುವ ಉದ್ದೇಶದಿಂದ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರು ಮಂಗಳವಾರ ರಿಪ್ಪನ್ ಪೇಟೆ ವ್ಯಾಪ್ತಿಯ ವಿವಿಧ ಸರ್ಕಾರಿ ಸಂಸ್ಥೆಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಮೂಲಸೌಕರ್ಯ, ಸೇವೆಗಳ ಸ್ಥಿತಿ ಹಾಗೂ ನಿರ್ವಹಣೆಯ ಬಗ್ಗೆ ಸಮಗ್ರವಾಗಿ ಅವಲೋಕನ ಮಾಡಿದರು.

ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ವೇಳೆ ಆಸ್ಪತ್ರೆಯ ಸ್ವಚ್ಛತೆ, ಔಷಧಗಳ ಲಭ್ಯತೆ ಹಾಗೂ ಸಿಬ್ಬಂದಿಯ ಹಾಜರಾತಿ ದಾಖಲೆಯನ್ನು ಪರಿಶೀಲಿಸಿದ ಜಿಲ್ಲಾಧಿಕಾರಿಗಳು, ರೋಗಿಗಳ ಚಿಕಿತ್ಸೆಯಲ್ಲಿ ಯಾವುದೇ ನಿರ್ಲಕ್ಷ್ಯ ಕಂಡುಬರಬಾರದು ಎಂದು ಕಠಿಣ ಸೂಚನೆ ನೀಡಿದರು. “ಪ್ರತಿಯೊಬ್ಬ ರೋಗಿಗೂ ಸಕಾಲದಲ್ಲಿ ಗುಣಮಟ್ಟದ ಚಿಕಿತ್ಸೆ ಸಿಗಬೇಕು. ಔಷಧಗಳ ಕೊರತೆ ಎನ್ನುವ ಪ್ರಶ್ನೆಯೇ ಬರಬಾರದು” ಎಂದು ಸ್ಪಷ್ಟಪಡಿಸಿದರು.
ನಂತರ ಅಂಬೇಡ್ಕರ್ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿದ ಅವರು, ವಿದ್ಯಾರ್ಥಿಗಳೊಂದಿಗೆ ಆತ್ಮೀಯವಾಗಿ ಮಾತುಕತೆ ನಡೆಸಿದರು. ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ, ಆಸಕ್ತಿಗಳು ಮತ್ತು ಭವಿಷ್ಯದ ಗುರಿಗಳ ಬಗ್ಗೆ ವಿಚಾರಿಸಿದಾಗ, ಮಕ್ಕಳು ಉತ್ಸಾಹದಿಂದ ತಮ್ಮ ಕನಸುಗಳನ್ನು ಹಂಚಿಕೊಂಡರು.
“ನಾನು ನಿಮ್ಮಂತೆಯೇ ಐಎಎಸ್ ಅಧಿಕಾರಿ ಆಗುತ್ತೇನೆ” ಎಂದು ವಿದ್ಯಾರ್ಥಿಯೊಬ್ಬ ಧೈರ್ಯದಿಂದ ಹೇಳಿದಾಗ ಜಿಲ್ಲಾಧಿಕಾರಿಗಳು ಸಂತಸ ವ್ಯಕ್ತಪಡಿಸಿ, ಕಠಿಣ ಪರಿಶ್ರಮ ಮತ್ತು ಶಿಸ್ತು ಇದ್ದರೆ ಯಾವುದೇ ಗುರಿ ಸಾಧಿಸಬಹುದು ಎಂದು ಪ್ರೇರಣೆ ನೀಡಿದರು. ಇನ್ನೂ ಕೆಲವರು ಎಲೆಕ್ಟ್ರಾನಿಕ್ ಇಂಜಿನಿಯರ್ ಹಾಗೂ ಪೊಲೀಸ್ ಅಧಿಕಾರಿ ಆಗುವ ಕನಸುಗಳನ್ನು ವ್ಯಕ್ತಪಡಿಸಿದರು.

ವಿದ್ಯಾರ್ಥಿ ನಿಲಯದ ಅಡುಗೆಮನೆ, ದಾಸ್ತಾನು ಕೊಠಡಿ ಹಾಗೂ ಭೋಜನಾಲಯವನ್ನು ಪರಿಶೀಲಿಸಿದ ಜಿಲ್ಲಾಧಿಕಾರಿಗಳು, ಆಹಾರದ ಗುಣಮಟ್ಟ ಹಾಗೂ ಸ್ವಚ್ಛತೆ ಕುರಿತು ಯಾವುದೇ ರಾಜಿ ಮಾಡಿಕೊಳ್ಳಬಾರದು ಎಂದು ಎಚ್ಚರಿಸಿದರು. “ವಿದ್ಯಾರ್ಥಿಗಳ ಆರೋಗ್ಯ ಮತ್ತು ಸುರಕ್ಷತೆ ಅತ್ಯಂತ ಪ್ರಮುಖ. ಯಾವುದೇ ತೊಂದರೆ ಉಂಟಾದರೆ ಸಂಬಂಧಿಸಿದವರನ್ನೇ ಹೊಣೆಗಾರರನ್ನಾಗಿ ಮಾಡಲಾಗುತ್ತದೆ” ಎಂದು ಹೇಳಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಭರತ್ ರಾಜ್, ಶಿರಸ್ತೇದಾರ್ ಸುಧೀರ್ ಕುಮಾರ್, ರಾಜಸ್ವ ನಿರೀಕ್ಷಕ ಸೈಯದ್ ಅಪ್ರೋಜ್, ವಿಎ ಮಂಜುನಾಥ್ ಹಾಗೂ ಪ್ರವೀಣ್ ಸೇರಿದಂತೆ ತಾಲ್ಲೂಕು ಮಟ್ಟದ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.














Leave a Reply