ರಿಪ್ಪನ್ಪೇಟೆ: ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನ ಚಿನ್ನೇಗೌಡ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ 14 ವರ್ಷದೊಳಗಿನ ಮಕ್ಕಳ ವಲಯ ಮಟ್ಟದ ಕ್ರೀಡಾಕೂಟ ಅತ್ಯಂತ ಯಶಸ್ವಿಯಾಗಿ ನೆರವೇರಿತು. ಸಾವಿರಾರು ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು ಹಾಗೂ ಕ್ರೀಡಾಭಿಮಾನಿಗಳ ಸಂಭ್ರಮಕ್ಕೆ ಸಾಕ್ಷಿಯಾದ ಈ ಕ್ರೀಡೋತ್ಸವದ ಅಂತ್ಯದಲ್ಲಿ ಮೈದಾನವೇ ಪ್ಲಾಸ್ಟಿಕ್ ಕಸದ ರಾಶಿಯಾಗಿ ಮಾರ್ಪಟ್ಟಿರುವುದು ಪರಿಸರ ಪ್ರೇಮಿಗಳಲ್ಲಿ ಬೇಸರ ಮೂಡಿಸಿದೆ.
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಕ್ಷೇತ್ರ ಸಮನ್ವಯಾಧಿಕಾರಿಗಳ ಕಚೇರಿ ಹಾಗೂ ಅರಸಾಳು, ಕೆಂಚನಾಲ, ರಿಪ್ಪನ್ಪೇಟೆ, ಬೆಳ್ಳೂರು, ಬಾಳೂರು, ಚಿಕ್ಕಜೇನಿ, ಕೋಡೂರು, ಪುರಪ್ಪೆಮನೆ, ಹರತಾಳು ಮತ್ತು ಹರಿದ್ರಾವತಿ ಸಮೂಹ ಸಂಪನ್ಮೂಲ ಕೇಂದ್ರಗಳ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕ್ರೀಡಾಸ್ಫೂರ್ತಿ ಗೆದ್ದಿತು, ನಾಗರಿಕ ಪ್ರಜ್ಞೆ ಸೋತಿತೇ?
ಓಟ, ಉದ್ದಜಿಗಿತ, ಎತ್ತರಜಿಗಿತ, ಖೋ -ಖೋ, ಕಬ್ಬಡಿ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ಮಕ್ಕಳು ಶಿಸ್ತು, ಕ್ರೀಡಾಸ್ಫೂರ್ತಿ ಮತ್ತು ಆತ್ಮವಿಶ್ವಾಸ ಪ್ರದರ್ಶಿಸಿದರು.ಆದರೆ ಕೆಲ ವಿದ್ಯಾರ್ಥಿಗಳು, ವೀಕ್ಷಕರು,ಸಾರ್ವಜನಿಕರಿಂದ ಕಾರ್ಯಕ್ರಮ ಮುಗಿದ ಬಳಿಕ ಮೈದಾನದಲ್ಲಿ ಎಲ್ಲೆಂದರಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ನೀರಿನ ಬಾಟಲಿಗಳು, ಕಪ್ಗಳು, ಚಿಪ್ಸ್ ಪ್ಯಾಕೆಟ್ಗಳು, ಐಸ್ಕ್ರೀಂ ಹೊದಿಕೆಗಳು ಹಾಗೂ ಇತರೆ ತ್ಯಾಜ್ಯ ನಾಗರಿಕ ಶಿಷ್ಟಾಚಾರದ ಪ್ರಶ್ನೆ ಎತ್ತಿದೆ.
ಜವಾಬ್ದಾರಿ ಯಾರದು?
ಕಸ ಬಿಸಾಡಿದ್ದು ಕೇವಲ ವಿದ್ಯಾರ್ಥಿಗಳೇ ಎಂಬುದಲ್ಲ; ಕೆಲ ಪೋಷಕರು, ಪ್ರೇಕ್ಷಕರು ಮತ್ತು ಆಹಾರ ಮಳಿಗೆಗಳಿಗೆ ಬಂದ ಗ್ರಾಹಕರ ನಿರ್ಲಕ್ಷ್ಯವೂ ಇದಕ್ಕೆ ಪ್ರಮುಖ ಕಾರಣವಾಗಿದೆ. ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸುವ ಪ್ರತಿಯೊಬ್ಬರೂ ಸ್ವಚ್ಛತೆ ಕಾಪಾಡುವುದು ಸಮಾನ ಜವಾಬ್ದಾರಿಯಾಗಿದೆ.
ಮುಂದೆ ಹೀಗಾದರೆ ಒಳ್ಳೆಯದು :
* ಮೈದಾನದಾದ್ಯಂತ ಒಣ-ತೇವ ಕಸದ ಪ್ರತ್ಯೇಕ ಡಸ್ಟ್ಬಿನ್ಗಳನ್ನು ಇಡಬೇಕು.
* ಪ್ರತಿಯೊಂದು ಶಾಲೆಯ ವಿದ್ಯಾರ್ಥಿಗಳಿಗೆ “ಸ್ವಚ್ಛತಾ ಪ್ರತಿಜ್ಞೆ” ಮಾಡಿಸಬೇಕು.
* ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿ ಕಾಗದ ಅಥವಾ ಮರುಬಳಕೆ ವಸ್ತುಗಳಿಗೆ ಆದ್ಯತೆ ನೀಡಬೇಕು.
* ಆಹಾರ ಮಳಿಗೆಗಳಿಗೆ ಕಸ ವಿಲೇವಾರಿ ಕಡ್ಡಾಯ ನಿಯಮ ವಿಧಿಸಬೇಕು ಪಾಲಿಸದಿದ್ದರೆ ದಂಡ ವಿಧಿಸಿ.
ಗ್ರಾಂ. ಪಂಚಾಯತ್ ನವರಿಗೆ ಕೇಳಿದರೆ ನಮ್ಮ ಸಿಬ್ಬಂದಿ ಸ್ವಚ್ಛಗೊಳಿಸುತ್ತಾರೆ ಎಂದು ತಕ್ಷಣ ಹೇಳಿಬಿಡುತ್ತಾರೆ ಅದು ನಮ್ಮ ಕರ್ತವ್ಯ ಎನ್ನುತ್ತಾರೆ. ಹಾಗಾದರೆ ನಾಗರೀಕರಾಗಿ ನಮಗೆ ಏಕಿಲ್ಲ ಈ ಕರ್ತವ್ಯ? ನಮ್ಮನ್ನು ನಾವೇ ಪ್ರಶ್ನಿಸೋಣ!
ಕ್ರೀಡಾಕೂಟವು ಕೇವಲ ಪದಕ ಗೆಲ್ಲುವ ವೇದಿಕೆ ಅಲ್ಲ; ಉತ್ತಮ ನಾಗರಿಕರನ್ನು ರೂಪಿಸುವ ಶಾಲೆಯೂ ಹೌದು. ಮಕ್ಕಳು ಮೈದಾನದಲ್ಲಿ ಶಿಸ್ತು ಕಲಿಯುವಂತೆ, ಸಾರ್ವಜನಿಕ ಸ್ಥಳವನ್ನು ಸ್ವಚ್ಛವಾಗಿಡುವ ಸಂಸ್ಕೃತಿಯನ್ನೂ ಕಲಿಸಬೇಕು. “ಸ್ವಚ್ಛ ಮೈದಾನವೇ ನಿಜವಾದ ಕ್ರೀಡಾಸ್ಫೂರ್ತಿಯ ಗುರುತು ಎಂದು ಹೇಳುತ್ತಾರೆ ಪರ್ಯಾವರಣ ಸಂರಕ್ಷಕರು.

















Leave a Reply