ಸಾಗರ: ತಂದೆಯೊಂದಿಗೆ ತೋಟದಲ್ಲಿದ್ದ ವೇಳೆ ಕಡಂಜಗ ಹುಳುಗಳ ದಾಳಿಗೆ ಒಳಗಾದ 8 ವರ್ಷದ ಬಾಲಕ ಚಿಕಿತ್ಸೆ ಫಲಿಸದೆ ಮೃತಪಟ್ಟಿರುವ ಘಟನೆ ಸಾಗರ ತಾಲೂಕಿನ ಹೆಗ್ಗೋಡಿನ ಅತ್ತಿಸರ ಗ್ರಾಮದಲ್ಲಿ ನಡೆದಿದೆ.
ಅತ್ತಿಸರ ಗ್ರಾಮದ ವೆಂಕಟೇಶ್ ಹಾಗೂ ಶೋಭಾ ದಂಪತಿಯ ಪುತ್ರ, ಶೆಡ್ತಿಕೆರೆ ಸಹಿಪ್ರಾ ಶಾಲೆಯಲ್ಲಿ 2ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ನಿಶ್ಮೀತ್ ಮೃತಪಟ್ಟ ಬಾಲಕ.
ಆಗಸ್ಟ್ 13ರಂದು ಬೆಳಗ್ಗೆ ಮನೆಯ ಹಿತ್ತಲಿನ ತೋಟದಲ್ಲಿ ತಂದೆ ವೆಂಕಟೇಶ್ ಅವರೊಂದಿಗೆ ಇದ್ದ ವೇಳೆ ನಿಶ್ಮೀತ್ ಹಾಗೂ ಅವರ ತಂದೆಯ ಮೇಲೆ 20ಕ್ಕೂ ಹೆಚ್ಚು ಕಡಂಜಗ ಹುಳುಗಳು ದಾಳಿ ಮಾಡಿವೆ ಎನ್ನಲಾಗಿದೆ.
ದಾಳಿಯಿಂದ ಗಂಭೀರವಾಗಿ ಗಾಯಗೊಂಡ ನಿಶ್ಮೀತ್ ಅವರನ್ನು ತಕ್ಷಣ ಸಾಗರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಮೃತಪಟ್ಟಿದ್ದಾರೆ.
ಘಟನೆಯಲ್ಲಿ ತಂದೆ ವೆಂಕಟೇಶ್ ಅವರಿಗೂ ಹುಳುಗಳು ಕಚ್ಚಿದ್ದು, ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.
ಬಾಲಕನ ಅಕಾಲಿಕ ನಿಧನದಿಂದ ಕುಟುಂಬಸ್ಥರು ಹಾಗೂ ಗ್ರಾಮಸ್ಥರಲ್ಲಿ ತೀವ್ರ ದುಃಖ ಆವರಿಸಿದೆ. ಘಟನೆ ಕುರಿತು ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

















Leave a Reply