
ಹೊಸನಗರ: ಹೊಸನಗರ ಜೂನಿಯರ್ ಕಾಲೇಜು ವಿಭಾಗದ ಸರ್ಕಾರಿ ಪ್ರೌಢಶಾಲೆಯು ಈ ಬಾರಿಯ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ದಾಖಲಿಸಿ ಗಮನ ಸೆಳೆದಿದೆ. ಶಾಲೆಯ 100 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಎಲ್ಲರೂ ಉತ್ತೀರ್ಣರಾಗಿದ್ದಾರೆ.
ಈ ಸಾಧನೆ ಹಿನ್ನೆಲೆ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಅಶ್ವಿನಿಕುಮಾರ್ ಅವರು ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರಿಗೆ ಉಚಿತ ಪ್ರವಾಸ ವ್ಯವಸ್ಥೆ ಮಾಡಿ ಅಭಿನಂದನೆ ಸಲ್ಲಿಸಿದರು. ಎರಡು ತಿಂಗಳ ಹಿಂದೆಯೇ “ಶಾಲೆ ಶೇ.100 ಫಲಿತಾಂಶ ಸಾಧಿಸಿದರೆ ಎಲ್ಲರಿಗೂ ಉಚಿತ ಪ್ರವಾಸ ಏರ್ಪಡಿಸಲಾಗುವುದು” ಎಂದು ಘೋಷಣೆ ಮಾಡಲಾಗಿತ್ತು. ಅದರಂತೆ ಭರವಸೆ ಈಡೇರಿಸಲಾಗಿದೆ.

ಪ್ರವಾಸ ತಂಡವು ಬೆಳಿಗ್ಗೆ 7 ಗಂಟೆಗೆ ಶಾಲಾ ಆವರಣದಿಂದ ಹೊರಟು ಕುಪ್ಪಳ್ಳಿ, ಶೃಂಗೇರಿ, ಸಿರಿಮನೆ ಫಾಲ್ಸ್ ಹಾಗೂ ಹರಿಹರಪುರ ಮಠ ಸೇರಿದಂತೆ ವಿವಿಧ ಪ್ರವಾಸಿ ತಾಣಗಳಿಗೆ ಭೇಟಿ ನೀಡಿತು. ವಿದ್ಯಾರ್ಥಿಗಳು ಹಾಗೂ ಪೋಷಕರು ಪ್ರವಾಸದಲ್ಲಿ ಸಂತಸದಿಂದ ಭಾಗವಹಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎಸ್ಡಿಎಂಸಿ ಅಧ್ಯಕ್ಷ ಅಶ್ವಿನಿಕುಮಾರ್, “ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡುವ ಮೂಲಕ ಶಾಲೆಯ ಗೌರವ ಹೆಚ್ಚಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿಯೂ ವಿದ್ಯಾರ್ಥಿಗಳಿಗೆ ಇನ್ನಷ್ಟು ಪ್ರೋತ್ಸಾಹ ನೀಡಲಾಗುವುದು” ಎಂದು ಹೇಳಿದರು.
ಶಾಲೆಯ ಶಿಕ್ಷಕರು ಹಾಗೂ ಪೋಷಕರು ಎಸ್ಡಿಎಂಸಿ ಅಧ್ಯಕ್ಷರ ಈ ಪ್ರೋತ್ಸಾಹದ ಕಾರ್ಯವನ್ನು ಶ್ಲಾಘಿಸಿದರು.

















Leave a Reply