ಹೊಸನಗರ: ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಗೆ ಸೇರಿದ ನೆಹರೂ ಮೈದಾನದ ಸುತ್ತಲೂ ನಿರ್ಮಿಸಿದ್ದ ಮೆಷ್ ಬೇಲಿಯನ್ನು ತೆರವುಗೊಳಿಸಿ, ಅಲ್ಲಲ್ಲಿ ಹೊಸದಾಗಿ ಫುಡ್ಕೋರ್ಟ್ ನಿರ್ಮಿಸಲು ಪಟ್ಟಣ ಪಂಚಾಯಿತಿ ಮುಂದಾಗಿರುವ ಕ್ರಮಕ್ಕೆ ಪಟ್ಟಣದ ನಾಗರಿಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಪಟ್ಟಣ ಪಂಚಾಯಿತಿಗೆ ಹಲವರು ಮೌಖಿಕವಾಗಿ ದೂರು ನೀಡಿದ್ದು, ಈ ಹಿಂದೆ ಹೆದ್ದಾರಿ ನಿಯಮಾನುಸಾರ ಸ್ಥಳಾಂತರಗೊಂಡಿದ್ದ ಬೀದಿ ಬದಿ ವ್ಯಾಪಾರಿಗಳಿಗೆ ಹಾಗೂ ಗೂಡಂಗಡಿಗಳಿಗೆ ಮತ್ತೆ ಅದೇ ಜಾಗದಲ್ಲಿ ಅಂಗಡಿ ತೆರೆಯಲು ಪಟ್ಟಣ ಪಂಚಾಯಿತಿ ಫುಡ್ಕೋರ್ಟ್ ಹೆಸರಿನಲ್ಲಿ ಅವಕಾಶ ನೀಡಲು ಮುಂದಾಗಿದೆ. ಇದನ್ನು ಸಂಪೂರ್ಣ ಅವೈಜ್ಞಾನಿಕ ಕ್ರಮವೆಂದು ಸಾರ್ವಜನಿಕರು ಆಕ್ಷೇಪಿಸಿದ್ದಾರೆ.
ಫುಟ್ಪಾತ್ ಸಹ ಸಮೀಪದಲ್ಲೇ ಇರುವುದರಿಂದ ಫುಡ್ಕೋರ್ಟ್ಗೆ ಆಗಮಿಸುವ ಗ್ರಾಹಕರು ಮುಂದೆ ಫುಟ್ಪಾತ್ ಮೇಲೆಯೇ ವಾಹನ ನಿಲುಗಡೆ ಮಾಡುವ ಸಾಧ್ಯತೆ ಇದೆ. ಇದರಿಂದ ಅಪಘಾತಗಳಿಗೆ ದಾರಿ ತೆರೆದುಕೊಳ್ಳುವ ಆತಂಕವಿದೆ. ಫುಟ್ಪಾತ್ ಮೇಲೆ ಯಾವುದೇ ಅಂಗಡಿ ಮಳಿಗೆ ಇರಬಾರದು, ಪಾದಚಾರಿಗಳ ಸಂಚಾರಕ್ಕೆ ಮಾತ್ರ ಸೀಮಿತವಾಗಿರಬೇಕು ಎಂಬ ಸುಪ್ರೀಂಕೋರ್ಟ್ ಆದೇಶವೂ ಇದೆ. ಇಂತಹ ಪರಿಸ್ಥಿತಿಯಲ್ಲಿಯೇ ಫುಡ್ಕೋರ್ಟ್ ನಿರ್ಮಾಣಕ್ಕೆ ಮುಂದಾಗಿರುವುದು ಪ್ರಶ್ನೆಗೆ ಕಾರಣವಾಗಿದೆ.
30 ಲಕ್ಷ ರೂ. ಅನುದಾನದಲ್ಲಿ ಪಟ್ಟಣ ಪಂಚಾಯಿತಿ ಕೈಗೊಂಡಿರುವ ಈ ಫುಡ್ಕೋರ್ಟ್ ಯೋಜನೆ ಎಂದು ತಿಳಿದುಬಂದಿದ್ದು, ಈಗಾಗಲೇ ಮೆಷ್ ಬೇಲಿಯನ್ನು ತೆರವುಗೊಳಿಸಲಾಗಿದೆ. ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿಗಳ ಗಮನಕ್ಕೂ ಬಾರದಂತೆ ಕಾಮಗಾರಿ ಆರಂಭಿಸಲಾಗಿದೆ ಎನ್ನಲಾಗಿದೆ.
ಅನುದಾನವನ್ನು ಬಳಸಬೇಕು ಎಂಬ ಕಾರಣಕ್ಕೆ ಬೀದಿ ಬದಿ ವ್ಯಾಪಾರಿಗಳ ಹಿತದೃಷ್ಟಿ ಇಲ್ಲದೆ ಹಾಗೂ ನಾಗರಿಕರ ಅಭಿಪ್ರಾಯಕ್ಕೂ ಮೌಲ್ಯ ನೀಡದೆ ಪಟ್ಟಣ ಪಂಚಾಯಿತಿ ನಡೆದುಕೊಳ್ಳುತ್ತಿದೆ ಎಂಬ ಆರೋಪ ಕೇಳಿಬಂದಿದೆ.

“ನಮ್ಮ ಅಧಿಕಾರಾವಧಿಯಲ್ಲಿ ಫುಡ್ಕೋರ್ಟ್ಗೆ ಬೇರೆಡೆ ಜಾಗ ಅಂತಿಮಗೊಳಿಸಲಾಗಿತ್ತು. ಈಗ ಏಕಾಏಕಿ ಹೆದ್ದಾರಿ ಪಕ್ಕ ನಿರ್ಮಿಸಲು ಮುಂದಾಗಿರುವುದು ಅವೈಜ್ಞಾನಿಕ. ಈಗಾಗಲೇ ಒಮ್ಮೆ ತೆರವುಗೊಳಿಸಲಾದ ಬೀದಿ ಬದಿ ವ್ಯಾಪಾರಿಗಳಿಗೆ ಶಾಶ್ವತ ಜಾಗ ನೀಡಬೇಕು, ಮರು ಸಮಸ್ಯೆ ಉಂಟಾಗುವ ಪರಿಸ್ಥಿತಿ ಬರಬಾರದು. ಪಟ್ಟಣ ಪಂಚಾಯಿತಿ ಹಾಗೂ ಸಂಬಂಧಪಟ್ಟವರು ಈ ಬಗ್ಗೆ ಗಮನ ಹರಿಸಬೇಕು. ಅನುದಾನ ಬಳಸಬೇಕೆಂದು ಎಲ್ಲೆಂದರಲ್ಲಿ ಕಾಮಗಾರಿ ಮಾಡುವುದು ಸರಿಯಲ್ಲ.”
– ಹಾಲಗದ್ದೆ ಉಮೇಶ್, ಮಾಜಿ ಅಧ್ಯಕ್ಷರು, ಪಟ್ಟಣ ಪಂಚಾಯಿತಿ















Leave a Reply