ಮೂಲೆಗದ್ದೆ ಶ್ರೀಗಳ ನೇತೃತ್ವದಲ್ಲಿ ನಡೆದ ನಗರದಿಂದ ರಿಪ್ಪನ್ ಪೇಟೆ ವರೆಗೆ ಬೃಹತ್ ಪಾದಯಾತ್ರೆ ಸಮಾರೋಪ ಕಾರ್ಯಕ್ರಮ
ರಿಪ್ಪನ್ಪೇಟೆ: ಹೊಸನಗರ ಕ್ಷೇತ್ರ ಮರು ಹುಟ್ಟುಪಡೆಯುವ ಮೂಲಕ ಮಲೆನಾಡಿನ ಹಿಂದಿನ ವೈಭವ ಮರುಕಳಿಸಲಿ. ಸಂಸತ್ತಿನಲ್ಲಿ ಕ್ಷೇತ್ರ ವಿಂಗಡನೆ ಹಾಗೂ ಮಹಿಳಾ ಮೀಸಲಾತಿ ಕುರಿತು ವಿಶೇಷ ಅಧಿವೇಶನ ನಡೆಯಲಿದೆ. ಹೊಸನಗರ ಕ್ಷೇತ್ರಕ್ಕೆ ಸಂಸತ್ ಅಧಿವೇಶನದಲ್ಲಿ ಧ್ವನಿಯೆತ್ತಲು ಈ ಪಾದಯಾತ್ರೆ ಪೂರಕವಾಗಲಿದೆ ‘ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಇಲ್ಲಿನ ಚಿನ್ನೇಗೌಡ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಹೊಸನಗರ ಕ್ಷೇತ್ರ ಉಳಿಸಿ ಹೋರಾಟದ ಪಾದಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಪರಮಪೂಜ್ಯ ಮೂಲೆಗದ್ದೆ ಶ್ರೀಗಳ ನೇತೃತ್ವದ ಪಾದಯಾತ್ರೆಯಲ್ಲಿ ಸ್ವಾಮಿ ರಾವ್ ರಂತಹ ಹಿರಿಯ ಮುತ್ಸದಿಗಳಿಂದ ಹೋರಾಟ ಮಾಡಿರುವ ಕಾರಣ ಸರ್ಕಾರದ ಗಮನ ಸೆಳೆಯಲು ನಮಗೆ ಪೂರಕವಾಗಿದೆ ಎಂದು ಹೇಳಿ, ಕ್ಷೇತ್ರ ಮರುಸ್ಥಾಪನೆಗೆ ನಾವು ಸಂಪೂರ್ಣ ಬೆಂಬಲದೊಂದಿಗೆ ಜನರ ಭಾವನೆಗೆ ನಾವು ಬದ್ಧರಾಗಿದ್ದೇವೆ. ಆದರೆ ಇದು ಕೇವಲ ಕೇಂದ್ರ ಸರ್ಕಾರದಿಂದಲೇ ಆಗುವಂತದ್ದಲ್ಲ, ರಾಜ್ಯ ಸರ್ಕಾರ, ಉಸ್ತುವಾರಿ ಸಚಿವರು, ಸ್ಥಳೀಯ ಶಾಸಕರ ಮೂಲಕ ರಾಜ್ಯ ಸರ್ಕಾರ ದಿಂದ ಸಹಕಾರ ಸಿಗಬೇಕಾಗುತ್ತದೆ ಎಂದರು.
‘ಮಲೆನಾಡಿನ ಪಶ್ಚಿಮ ಘಟ್ಟಗಳ ಪರಿಸರದಲ್ಲಿ ಜನಸಂಖ್ಯೆ ಆಧಾರಿತ ಕ್ಷೇತ್ರ ವಿಂಗಡಣೆ ಮಾಡಿರುವುದು ಅವೈಜ್ಞಾನಿಕವಾಗಿದೆ. ಹೊಸನಗರ ಕ್ಷೇತ್ರದ ಉಳಿವಿಗೆ ಮಠಾಧೀಶರ ಸಾರಥ್ಯದಲ್ಲಿ ಪಕ್ಷಾತೀತವಾಗಿ ಹಮ್ಮಿಕೊಂಡಿರುವ ಹೋರಾಟ ಯಶಸ್ವಿಯಾಗಬೇಕಾದ ಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹಾಗೂ ಸಂಸದ ಬಿ.ವೈ.ರಾಘವೇಂದ್ರ ಅವರು ವಾಸ್ತವಿಕತೆಯ ನೆಲೆಗಟ್ಟಿನಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಗಮನ ಸೆಳೆಯಬೇಕು.

‘ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರು ಈ ನಿಟ್ಟಿನಲ್ಲಿ ವಿಶೇಷ ಪ್ರಯತ್ನ ನಡೆಸಿದ್ದರು. ಅಂದು ಅಧಿಕಾರಿಗಳ ತಪ್ಪು ಮಾಹಿತಿಯಿಂದ ಆದ ಪ್ರಮಾದ ಇಂದು ಕ್ಷೇತ್ರದ ಜನತೆಯನ್ನು ತಬ್ಬಲಿ ಮಾಡಿದೆ’ ಎಂದು ತಿಳಿಸಿದರು. ಹೊಸನಗರ ಕ್ಷೇತ್ರದ ಮರು ಸ್ಥಾಪನೆಗೆ ಸರ್ಕಾರದ ನಿಟ್ಟಿನಲ್ಲಿ ಏನೆಲ್ಲಾ ಕೆಲಸ ಆಗಬೇಕೋ ಅದನ್ನು ಮಾಡಿಸುವ ಹೊಣೆ ಹೊರುತ್ತೇನೆ. ಆ ಮೂಲಕ ಕ್ಷೇತ್ರದ ಜನತೆಗೆ ನ್ಯಾಯ ಒದಗಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಹರತಾಳು ಹಾಲಪ್ಪ ಹೇಳಿದರು.
ಕಾನೂನಾತ್ಮಕವಾಗಿ ಸಂಸದ ಬಿ.ವೈ.ರಾಘವೇಂದ್ರ ಅವರಿಗೆ ಎಲ್ಲಾ ಬಗೆಯ ಸಹಕಾರ ನೀಡುತ್ತೇನೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.
‘ನಾಡಿಗೆ ಬೆಳಕು ನೀಡುವ ನಿಟ್ಟಿನಲ್ಲಿ ಸರ್ವಸ್ವವನ್ನೂ ಕಳೆದುಕೊಂಡ ಹೊಸನಗರಕ್ಕೆ ವಿಧಾನಸಭಾ ಕ್ಷೇತ್ರ ಸ್ಥಾನಮಾನ ಸಿಗಬೇಕಿದೆ. ಪಕ್ಷಾತೀತ ಹೋರಾಟದ ಮೂಲಕ ಜನಸಾಮಾನ್ಯರಿಗೆ ನ್ಯಾಯ ಒದಗಿಸುವುದು ನಮ್ಮ ಕರ್ತವ್ಯ’ ಎಂದು ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಕ್ಷೇತ್ರ ಮರು ಸ್ಥಾಪನೆಗೆ ಪಶ್ಚಿಮ ಘಟ್ಟ ಮಾನದಂಡವಾಗಲಿ, ಸರ್ಕಾರದ ಯೋಜನೆಗಳಿಂದ ನಾವು ಕ್ಷೇತ್ರ ಕಳೆದುಕೊಂಡಿದ್ದೇವೆ. ಈ ಬಾರಿ ಕ್ಷೇತ್ರ ಮರು ವಿಂಗಡಣೆಯಲ್ಲಿ ಕ್ಷೇತ್ರ ಬಿಡುವ ಪ್ರಶ್ನೆಯೇ ಇಲ್ಲ ಎಂದು ಮುಂದಿನ ಎಲ್ಲಾ ಹೋರಾಟಕ್ಕೂ ನಾವು ಸಿದ್ಧ ಎಂದು ಎನ್. ಆರ್. ದೇವಾನಂದ ಹೇಳಿದರು.
ಹೋರಾಟದ ನೇತೃತ್ವ ವಹಿಸಿದ್ದ ಮೂಲೆಗದ್ದೆಯ ಅಭಿನವ ಚನ್ನಬಸವ ಮಹಾಸ್ವಾಮಿಗಳು ಮಾತನಾಡಿ ಹೊಸನಗರ ಕ್ಷೇತ್ರ ಮರುಸ್ಥಾಪನೆ ಆಗಬೇಕೆಂದರೆ ಸಂಸತ್ ನಲ್ಲಿ ಇದು ಚರ್ಚೆಯಾಗಬೇಕು ಸಂಸದರು ಮತ್ತು ಕರ್ನಾಟಕ ರಾಜ್ಯ ಸರ್ಕಾರದ ಸಚಿವರು,ಶಾಸಕರುಗಳು ಎಲ್ಲರೂ ಒಂದಾಗಿ ಕ್ಷೇತ್ರಕ್ಕಾಗಿ ಧ್ವನಿಎತ್ತಬೇಕು ಎಂದು ಆಗ್ರಹಿಸಿದರು.
ಹೊಂಬುಜ ಮಠದ ಪೀಠಾಧಿಕಾರಿ ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ವರ್ಯ ಸ್ವಾಮೀಜಿ ಸಮಾರೋಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ‘ಭೌಗೋಳಿಕ ಹಿನ್ನೆಲೆಯಲ್ಲಿ ಹೊಸನಗರ ಕ್ಷೇತ್ರ ನಿರಂತರ ಶೋಷಣೆಗೆ ಒಳಗಾಗಿದೆ. ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಹೋರಾಟ ಅನಿವಾರ್ಯ’ ಎಂದರು.


ಜುಮ್ಮಾ ಮಸೀದಿಯ ಧರ್ಮ ಗುರು ಮುನೀರ್ ಸಖಾಫಿ, ಮಾಜಿ ಶಾಸಕ ಬಿ.ಸ್ವಾಮಿರಾವ್, ಜಿಲ್ಲಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡ, ಕಲಗೋಡು ರತ್ನಾಕರ, ವೀರೇಶ್,ಆರ್. ಎ ಚಾಬುಸಾಬ್,ಎನ್ ಸತೀಶ್, ಎನ್ .ವರ್ತೇಶ್, ಚಂದ್ರಮೌಳಿ ಗೌಡ, ಮಹೇಶ್ ದೇವರಸಲಿಕೆ, ಚಿದಂಬರ ಎಚ್. ಬಿ, ತಾಲ್ಲೂಕಿನ ವಿವಿಧ ಸಂಘ ಸಂಸ್ಥೆಗಳ ಮುಖಂಡರು ಹಾಜರಿದ್ದರು.
ಇಡೀ ರಾಜ್ಯಕ್ಕೆ ಬೆಳಕು ಕೊಟ್ಟಿದ್ದೇವೆ ಎಲ್ಲರೂ ಬೆಳಕಲ್ಲಿದ್ದಾರೆ ಆದರೆ ನಮ್ಮ ಹೊಸನಗರ ಕತ್ತಲಲ್ಲಿ ಇದೆ. ತಾಲೂಕಿನಲ್ಲಿ ಅಭಿವೃದ್ಧಿ ಕುಂಠಿತವಾಗಿದೆ ಹೀಗಾಗಿ ಸ್ವತಂತ್ರ ಕ್ಷೇತ್ರ, ಎಂಎಲ್ಎ ಬೇಕು ಎಂದು ಹೋರಾಟ ಕೈಗೆತ್ತಿಕೊಂಡಿದ್ದೇವೆ.
- ಶ್ರೀಅಭಿನವ ಚನ್ನಬಸವ ಸ್ವಾಮೀಜಿ,ಮೂಲೆಗದ್ದೆ ಮಠ
ಹೊಸನಗರ ಕ್ಷೇತ್ರ ಮರುಸ್ಥಾಪನೆಯಿಂದಾಗಿ ಮಲೆನಾಡಿನ ಜನರಿಗೆ ನ್ಯಾಯ ಸಿಗಲಿದೆ.
- ಶ್ರೀರೇಣುಕಾನಂದ ಸ್ವಾಮೀಜಿ,ನಾರಾಯಣ ಗುರು ಮಠ, ನಿಟ್ಟೂರು
ಶೈಕ್ಷಣಿಕ,ಸಾಮಾಜಿಕ,ಭೌಗೋಳಿಕ ಹೀಗೆ ನಾನಾ ಕಾರಣಗಳಿಗಾಗಿ ವಿಧಾನಸಭಾ ಕ್ಷೇತ್ರದ ಮರುಸ್ಥಾಪನೆ ಅಗತ್ಯವಾಗಿದೆ.
- ಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ, ಹೊಂಬುಜ ಮಠ















Leave a Reply