ಪರ-ವಿರೋಧ, ಏನಿದು ವಿವಾದ ?
ಗರ್ತಿಕೆರೆ ಕೆಪಿಎಸ್ ಶಾಲೆ ಮುಖ್ಯ ಶಿಕ್ಷಕನ ವರ್ಗಾವಣೆ ಮಾಡುವಂತೆ ಎಸ್ ಡಿ ಎಂ ಸಿ ಪಟ್ಟು
ಗರ್ತಿಕೆರೆ : ಇತ್ತೀಚೆಗೆ ಕೆಪಿಎಸ್ ಶಾಲೆಯ ಎಸ್ ಡಿ ಎಂ ಸಿ ಸದಸ್ಯರೆಲ್ಲರೂ ಸೇರಿ ಮುಖ್ಯ ಶಿಕ್ಷಕರನ್ನು ವರ್ಗಾಯಿಸುವಂತೆ ಒತ್ತಾಯಿಸಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿಯನ್ನ ಸಲ್ಲಿಸಿದರು.

ಮನವಿ ಪತ್ರದಲ್ಲಿ ಮುಖ್ಯ ಶಿಕ್ಷಕರು ಸರ್ವಾಧಿಕಾರಿ ಧೋರಣೆಯನ್ನು ಹೊಂದಿದ್ದು ಏಕ ಪಕ್ಷಿಯವಾಗಿ ಶಾಲೆಯ ವಿಷಯದಲ್ಲಿ ನಿರ್ಣಯಗಳನ್ನು ಕೈಗೊಳ್ಳುತ್ತಿದ್ದಾರೆ . ಅವಾಚ್ಯ ಶಬ್ದಗಳಿಂದ ಎಸ್ಡಿಎಂಸಿ ಸದಸ್ಯರೊಂದಿಗೆ ವರ್ತಿಸಿ ನಿಂದಿಸಿರುವುದಾಗಿ ಮನವಿಯಲ್ಲಿ ಆರೋಪಿಸಲಾಗಿದೆ. ಈಗಾಗಲೇ ಇದು ಮೂರನೇ ಮನವಿಯಾಗಿದ್ದು ಈ ಹಿಂದೆ ಮನವಿ ಮಾಡಿಕೊಂಡಾಗ ಮೂರು ತಿಂಗಳು ಸಮಯ ಕೇಳಿ ನಾನೇ ವರ್ಗಾಯಿಸಿಕೊಳ್ಳುವೆ ಎಂದು ಹೇಳಿದ್ದರು. ತದ ನಂತರವೂ ಉದ್ಧಟತನ ಮೆರೆದಿರುವ ಕಾರಣದಿಂದ ನಾವು ಪುನ: ಮನವಿಯನ್ನು ಸಲ್ಲಿಸಿದ್ದೇವೆ ಎಂದು ಉಲ್ಲೇಖಿಸಲಾಗಿದೆ.
ಶಾಲೆಯಲ್ಲಿ ಪಾಠ ಮಾಡುವಾಗ ಅತಿ ಹೆಚ್ಚಾಗಿ ಮೊಬೈಲ್ ಬಳಸುವುದು, ಬ್ಲೂಟೂತ್ ಹಾಕಿಕೊಂಡು ಮಾತನಾಡುತ್ತಾ ಇರುತ್ತಾರೆ ಮಕ್ಕಳಿಗೆ ಸರಿಯಾಗಿ ಬೋಧನೆಯನ್ನು ಮಾಡುತ್ತಿರುವುದಿಲ್ಲ ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ!
ಮನವಿಯನ್ನು ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ, ಮಾನ್ಯ ಸಚಿವರಿಗೆ ನೀಡಲಾಗಿದ್ದು ಈ ಕೂಡಲೇ ಶಾಲೆಯ ಮತ್ತು ಮಕ್ಕಳ ಹಿತದೃಷ್ಟಿಯಿಂದ ವರ್ಗಾವಣೆ ಮಾಡುವಂತೆ ಕೆಪಿಎಸ್ ಶಾಲೆಯ ಎಸ್ ಡಿ ಎಂ ಸಿ ವತಿಯಿಂದ ಮನವಿ ಪತ್ರವನ್ನು ಸಲ್ಲಿಸಲಾಗಿತ್ತು.
ಮುಖ್ಯ ಶಿಕ್ಷಕ ವರ್ಗಾವಣೆ ರದ್ದುಗೊಳಿಸುವಂತೆ ಗರ್ತಿಕೆರೆ ಕೆಪಿಎಸ್ ಶಾಲೆ ಮುಂದೆ ಪೋಷಕರಿಂದ ಪ್ರತಿಭಟನೆ
ಗುರುವಾರ (ಜ.29) ಗರ್ತಿಕೆರೆ ಕೆಪಿಎಸ್ ಸರ್ಕಾರಿ ಶಾಲೆಯ ಶಿಕ್ಷಕ ಸತ್ಯನಾರಾಯಣ್ ಅವರನ್ನು ವರ್ಗಾವಣೆಗೊಳಿಸುವಂತೆ ಶಿಕ್ಷಣ ಇಲಾಖೆ ಹೊರಡಿಸಿರುವ ಆದೇಶಕ್ಕೆ ವಿರೋಧ ವ್ಯಕ್ತಪಡಿಸಿ ಕೆಲವು ಪೋಷಕರು, ಬೆಂಬಲಿಗರು ಶಾಲೆ ಎದುರು ಪ್ರತಿಭಟನೆ ನಡೆಸಿ ಎಸ್ ಡಿ ಎಂ ಸಿ ಸಮಿತಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಶಾಲೆಯಲ್ಲಿ ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಸತ್ಯನಾರಾಯಣ್ ಅವರು ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಮಕ್ಕಳ ಶೈಕ್ಷಣಿಕ ಸಾಧನೆಗೂ ಪೋಷಕರ ವಿಶ್ವಾಸಕ್ಕೂ ಕಾರಣರಾಗಿದ್ದಾರೆ ಎಂದು ಪೋಷಕರು ಹೇಳಿದರು. ಇಂತಹ ಶಿಕ್ಷಕರನ್ನು ವರ್ಗಾವಣೆಗೊಳಿಸುವುದು ಶಾಲೆಯ ಶೈಕ್ಷಣಿಕ ವಾತಾವರಣಕ್ಕೆ ಧಕ್ಕೆ ತರಲಿದೆ ಎಂದು ಅವರು ಪ್ರತಿಭಟನಾಕಾರರು ಅಭಿಪ್ರಾಯಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಪ್ರಸ್ತುತ ಶಾಲಾಭಿವೃದ್ಧಿ ಸಮಿತಿಯನ್ನು ವಜಾಗೊಳಿಸಿ ನೂತನ ಸಮಿತಿಯನ್ನು ರಚಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು. ಶಿಕ್ಷಕ ವರ್ಗಾವಣೆ ಆದೇಶವನ್ನು ಹಿಂತೆಗೆದುಕೊಳ್ಳುವ ಜೊತೆಗೆ ಶಾಲೆಯ ಹಿತದೃಷ್ಟಿಯಿಂದ ಪಾರದರ್ಶಕ ಆಡಳಿತವನ್ನು ಜಾರಿಗೆ ತರಬೇಕು ಎಂದು ಅವರು ಒತ್ತಾಯಿಸಿದರು.
ಆಗ್ರಹಗಳಿಗೆ ಸ್ಪಂದನೆ ದೊರಕದಿದ್ದರೆ, ಶಾಲೆಯಲ್ಲಿ ಓದುತ್ತಿರುವ ಎಲ್ಲಾ ಮಕ್ಕಳ ಟಿಸಿ ಪಡೆದು ಸಾಮೂಹಿಕವಾಗಿ ಬೇರೆ ಶಾಲೆಗಳಿಗೆ ದಾಖಲಿಸುವ ಕಠಿಣ ನಿರ್ಧಾರ ಕೈಗೊಳ್ಳಲಾಗುವುದು ಎಂದು ಪೋಷಕರು ಎಚ್ಚರಿಕೆ ನೀಡಿದರು. ವಿಷಯದ ಕುರಿತು ಶಿಕ್ಷಣ ಇಲಾಖೆ ಹಾಗೂ ಜಿಲ್ಲಾಡಳಿತ ತಕ್ಷಣ ಮಧ್ಯಪ್ರವೇಶಿಸಿ ನ್ಯಾಯ ಒದಗಿಸಬೇಕೆಂದು ಕೆಲವು ಪೋಷಕರು ಮನವಿ ಮಾಡಿದ್ದಾರೆ.
ಈ ಪರ ವಿರೋಧದ ನಡುವೆ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯನ್ನು ಇಟ್ಟುಕೊಂಡು ಶಿಕ್ಷಣ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದಾರೆ.












Leave a Reply