ರಿಪ್ಪನ್ಪೇಟೆ: ಸಾಗರ–ಆನಂದಪುರ–ರಿಪ್ಪನ್ಪೇಟೆ ಮಾರ್ಗವಾಗಿ ತೀರ್ಥಹಳ್ಳಿಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (KSRTC) ಎರಡು ಹೊಸ ಸರ್ಕಾರಿ ಬಸ್ಗಳ ಸಂಚಾರಕ್ಕೆ ಗುರುವಾರ ಚಾಲನೆ ನೀಡುವ ವೇಳೆ ರಿಪ್ಪನ್ಪೇಟೆಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು. ಖಾಸಗಿ ಬಸ್ ಏಜೆಂಟರು ಹಾಗೂ ಕಾಂಗ್ರೆಸ್ ಮುಖಂಡರ ನಡುವೆ ಮಾತಿನ ಚಕಮಕಿ ನಡೆದು, ಕೈ-ಕೈ ಮಿಲಾಯಿಸುವ ಹಂತಕ್ಕೂ ಪರಿಸ್ಥಿತಿ ತಲುಪಿತ್ತು. ಸ್ಥಳಕ್ಕಾಗಮಿಸಿದ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು.
ವಿನಾಯಕ ವೃತ್ತದಲ್ಲಿ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲೊಂದಾದ ಶಕ್ತಿ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಹೊಸ ಬಸ್ ಸೇವೆಗೆ ಚಾಲನೆ ನೀಡಲಾಗಿತ್ತು. ಉದ್ಘಾಟನೆಯ ಕೆಲವೇ ಕ್ಷಣಗಳಲ್ಲಿ ಪ್ರಯಾಣಿಕರನ್ನು ಹತ್ತಿಸುವ ವಿಚಾರವಾಗಿ ಖಾಸಗಿ ಬಸ್ ಏಜೆಂಟರು ಹಾಗೂ ಕೆಎಸ್ಆರ್ಟಿಸಿ ಚಾಲಕ-ನಿರ್ವಾಹಕರ ನಡುವೆ ವಾಗ್ವಾದ ಆರಂಭಗೊಂಡಿತು. ಬಳಿಕ ಕೆಲ ಕಾಂಗ್ರೆಸ್ ಮುಖಂಡರೂ ಮಧ್ಯಪ್ರವೇಶಿಸಿದ ಪರಿಣಾಮ ಮಾತಿನ ಚಕಮಕಿ ತೀವ್ರಗೊಂಡು ತಳ್ಳಾಟದ ಹಂತಕ್ಕೆ ತಲುಪಿತು.
ಪರಿಸ್ಥಿತಿ ಉದ್ವಿಗ್ನವಾಗುತ್ತಿದ್ದಂತೆ ಪೊಲೀಸರು ತಕ್ಷಣ ಸ್ಥಳಕ್ಕೆ ಆಗಮಿಸಿ ಎರಡೂ ಕಡೆಯವರನ್ನು ಸಮಾಧಾನಪಡಿಸಿ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆದರು.
ಈ ಬಸ್ ಸೇವೆಗಾಗಿ ಸ್ಥಳೀಯರ ದಶಕಗಳ ಬಹುಕಾಲದ ಬೇಡಿಕೆಗೆ ಶಾಸಕ ಗೋಪಾಲಕೃಷ್ಣ ಬೇಳೂರು ಸ್ಪಂದಿಸಿ, ಸಾಗರ–ಆನಂದಪುರ–ರಿಪ್ಪನ್ಪೇಟೆ–ತೀರ್ಥಹಳ್ಳಿ ಮಾರ್ಗದಲ್ಲಿ ಮಹಿಳೆಯರಿಗೆ ಶಕ್ತಿ ಯೋಜನೆಯ ಪ್ರಯೋಜನ ದೊರೆಯುವಂತೆ ಸರ್ಕಾರದ ಗಮನ ಸೆಳೆದಿದ್ದರು. ಅದರಂತೆ ಪ್ರಾಯೋಗಿಕವಾಗಿ ಸರ್ಕಾರಿ ಬಸ್ ಸೇವೆ ಆರಂಭವಾಗಿದೆ.
ಈಡೇರಿತು ದಶಕಗಳ ಕನಸು: ಈ ಭಾಗದ ಸಾರ್ವಜನಿಕರು ಸರ್ಕಾರಿ ಬಸ್ ನಲ್ಲಿ ಓಡಾಡುವ ಸೌಲಭ್ಯದಿಂದ ವಂಚಿತರಾಗಿದ್ದರು, ನಾಗರೀಕರ ನಿರಂತರ ಬೇಡಿಕೆಗೆ ಸ್ಪಂದಿಸಿದ ಶಾಸಕ ಬೇಳೂರು ಗೋಪಾಲಕೃಷ್ಣ ಅವರ ಪ್ರಯತ್ನಗಳಿಂದ ಈ ಸರ್ಕಾರಿ ಸೌಲಭ್ಯ ಗ್ರಾಮೀಣದವರೆಗೆ ತಲುಪುವಂತಾಗಿದೆ.
ಬಸ್ ವೇಳಾಪಟ್ಟಿ - ಎಲ್ಲಿಂದ ಎಲ್ಲಿಗೆ ಎಂಬ ಮಾಹಿತಿ 👇
06:30 AM ಶಿವಮೊಗ್ಗ - ತೀರ್ಥಹಳ್ಳಿ
07:00 AM ನಗರ - ತೀರ್ಥಹಳ್ಳಿ
08:05 AM ತೀರ್ಥಹಳ್ಳಿ - ನಗರ
08:15 AM ತೀರ್ಥಹಳ್ಳಿ - ರಿಪ್ಪನ್ಪೇಟೆ - ಸಾಗರ
09:10 AM ನಗರ - ತೀರ್ಥಹಳ್ಳಿ
11:00 AM ಸಾಗರ - ರಿಪ್ಪನ್ಪೇಟೆ -ತೀರ್ಥಹಳ್ಳಿ
11:30 AM ತೀರ್ಥಹಳ್ಳಿ - ರಿಪ್ಪನ್ಪೇಟೆ
01:15 PM ರಿಪ್ಪನ್ಪೇಟೆ - ತೀರ್ಥಹಳ್ಳಿ
02:00 PM ತೀರ್ಥಹಳ್ಳಿ - ರಿಪ್ಪನ್ಪೇಟೆ
03:00 PM ತೀರ್ಥಹಳ್ಳಿ - ನಗರ
03:30 PM ರಿಪ್ಪನ್ಪೇಟೆ - ಶಿವಮೊಗ್ಗ
04:30 PM ನಗರ - ತೀರ್ಥಹಳ್ಳಿ
05:35 PM ತೀರ್ಥಹಳ್ಳಿ - ನಗರ
















Leave a Reply