ಭಾರಿ ಗಾಳಿ ಮಳೆ ಅಬ್ಬರ – ತೆಂಗಿನ ಮರ ಉರುಳಿ ಟಾಟಾ ಏಸ್ ವಾಹನಕ್ಕೆ ಹಾನಿ, ಹಲಸಿನ ಮರದ ಹೇರೆ ಬಿದ್ದು ಮನೆಗೂ ನಷ್ಟ

Blue and Red Voter Education Banner 20260323 222751 0000 scaled ಭಾರಿ ಗಾಳಿ ಮಳೆ ಅಬ್ಬರ - ತೆಂಗಿನ ಮರ ಉರುಳಿ ಟಾಟಾ ಏಸ್ ವಾಹನಕ್ಕೆ ಹಾನಿ, ಹಲಸಿನ ಮರದ ಹೇರೆ ಬಿದ್ದು ಮನೆಗೂ ನಷ್ಟ
Spread the love

ರಿಪ್ಪನ್ ಪೇಟೆ: ಟ್ಟಣದ ಶಬರೀಶನಗರದಲ್ಲಿ ಭಾರಿ ಗಾಳಿ ಮಳೆಯ ಅಬ್ಬರದಿಂದ ತೆಂಗಿನ ಮರವೊಂದು ಧರೆಗುರುಳಿ ಟಾಟಾ ಏಸ್ ವಾಹನದ ಮೇಲೆ ಬಿದ್ದು ಹಾನಿಯಾದ ಘಟನೆ ನಡೆದಿದೆ.

ಶಬರೀಶನಗರ ನಿವಾಸಿ ಗುಂಡಣ್ಣ (ಗಂಗಾಧರ್) ಅವರಿಗೆ ಸೇರಿದ ಟಾಟಾ ಏಸ್ ವಾಹನವನ್ನು ಮನೆ ಸಮೀಪ ನಿಲ್ಲಿಸಲಾಗಿತ್ತು. ಏಕಾಏಕಿ ಶುರುವಾದ ಭಾರೀ ಮಳೆ ಮತ್ತು ಗಾಳಿ ಮಿಶ್ರಿತ ಆಲಿಕಲ್ಲು ಸುರಿಮಳೆಯ ಪರಿಣಾಮವಾಗಿ ಹತ್ತಿರದಲ್ಲಿದ್ದ ತೆಂಗಿನಮರ ಬೇರು ಸಮೇತ ಉರುಳಿ ಬಿದ್ದು ನೇರವಾಗಿ ವಾಹನದ ಮೇಲೆ ಬಿದ್ದಿದೆ. ಪರಿಣಾಮ ವಾಹನ ಸಂಪೂರ್ಣವಾಗಿ ಜಖಂಗೊಂಡಿದ್ದು, ವಾಹನದ ಮೇಲ್ಭಾಗ ಗಂಭೀರ ಹಾನಿಗೊಳಗಾಗಿದೆ ಎಂದು ತಿಳಿದು ಬಂದಿದೆ.

ಘಟನೆಯ ವೇಳೆ ಯಾರೂ ವಾಹನದ ಒಳಗೆ ಇಲ್ಲದಿರುವುದು ದೊಡ್ಡ ಅಪಾಯವನ್ನು ತಪ್ಪಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಗಾಳಿ ಮಳೆಯ ತೀವ್ರತೆಗೆ ಕೆಲಕಾಲ ಜನರಲ್ಲಿ ಆತಂಕ ಉಂಟಾಗಿತ್ತು.

ಘಟನೆಯ ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಪಿಎಸ್‌ಐ ರಾಜು ರೆಡ್ಡಿ ಹಾಗೂ ಪೊಲೀಸ್ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮರವನ್ನು ತೆರವುಗೊಳಿಸುವ ಕಾರ್ಯಾಚರಣೆಗೆ ಸ್ಥಳೀಯರ ಸಹಾಯದಿಂದ ಕ್ರಮ ಕೈಗೊಳ್ಳಲಾಗಿದೆ.

ಪ್ರತ್ಯೇಕ ಘಟನೆ: ಪಟ್ಟಣದ ತೀರ್ಥಹಳ್ಳಿ ರಸ್ತೆಯಲ್ಲಿ ಮತ್ತೊಂದು ಘಟನೆ ವರದಿಯಾಗಿದ್ದು, ಭಾರಿ ಗಾಳಿ ಮಳೆಯ ಅಬ್ಬರಕ್ಕೆ ವೃದ್ಧ ಮಹಿಳೆ ವನಾಜಾಕ್ಷಿ ಅವರ ಮನೆಯ ಸಮೀಪದಲ್ಲಿದ್ದ ಹಲಸಿನ ಮರದ ದೊಡ್ಡ ಹೇರೆ ಮುರಿದು ಮನೆಯ ಮೇಲ್ಛಾವಣಿಯ ಮೇಲೆ ಬಿದ್ದಿದೆ. ಪರಿಣಾಮ ಮನೆಯ ಮೇಲ್ಛಾವಣಿಯ ಕೆಲವು ಭಾಗಗಳಿಗೆ ಹಾನಿಯಾಗಿದ್ದು, ಮನೆ ಒಳಭಾಗಕ್ಕೂ ಸಣ್ಣ ಪ್ರಮಾಣದ ಹಾನಿ ಉಂಟಾದುದಾಗಿ ತಿಳಿದು ಬಂದಿದೆ.

ಘಟನೆ ಸಂಭವಿಸಿದ ವೇಳೆ ಮನೆಯೊಳಗೆ ಇದ್ದವರು ಸುರಕ್ಷಿತರಾಗಿದ್ದು ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ ಆಕಸ್ಮಿಕವಾಗಿ ಹೇರೆ ಬಿದ್ದ ಪರಿಣಾಮ ಮನೆಯವರು ಆತಂಕಕ್ಕೆ ಒಳಗಾದರು .

ಭಾರಿ ಗಾಳಿ ಮಳೆಯ ಹಿನ್ನೆಲೆ ಇಂತಹ ಘಟನೆಗಳು ಮರುಕಳಿಸುವ ಸಾಧ್ಯತೆ ಇರುವುದರಿಂದ, ಹಳೆಯ ಮರಗಳ ಬಳಿಯಲ್ಲಿ ಇರುವವರು ಹಾಗೂ ರಸ್ತೆ ಬದಿಯಲ್ಲಿ ಸಂಚರಿಸುವ ಸಾರ್ವಜನಿಕರು ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.

Leave a Reply

Your email address will not be published. Required fields are marked *