ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ಹಿಂಜಾವೇಯಿಂದ ಪಂಜಿನ ಮೆರವಣಿಗೆ
ರಿಪ್ಪನ್‌ಪೇಟೆ: ದೇಶ ವಿಭಜನೆಯ ಸಂದರ್ಭದಲ್ಲಿ ನಡೆದ ಮಾರಣಹೋಮದಲ್ಲಿ ಲಕ್ಷಾಂತರ ಹಿಂದೂಗಳ ಬಲಿದಾನದ ಮೂಲಕ ಭಾರತಕ್ಕೆ ಸ್ವಾತಂತ್ರ್ಯ ಪ್ರಾಪ್ತಿಯಾಗಿದೆ. ಹಿಂದೂ ಸಮಾಜ ತನ್ನ ಇತಿಹಾಸ, ಪರಂಪರೆ ಹಾಗೂ ಪೂರ್ವಜರ ಬಲಿದಾನವನ್ನು ಎಂದಿಗೂ ಮರೆಯಬಾರದು ಎಂದು ಹಿಂದೂ ಜಾಗರಣ ವೇದಿಕೆಯ ಪ್ರಾಂತ ಸಹ ಸಂಯೋಜಕ ಸತೀಶ್ ದಾವಣಗೆರೆ ಕರೆ ನೀಡಿದರು.
ಪಟ್ಟಣದಲ್ಲಿ ಶ್ರೀರಾಮಮಂದಿರದಲ್ಲಿ ಹಿಂದೂ ಜಾಗರಣ ವೇದಿಕೆಯ ವಿನಾಯಕಪೇಟೆ ಘಟಕದ ವತಿಯಿಂದ ಶನಿವಾರ ಆಯೋಜಿಸಿದ್ದ ಅಖಂಡ ಭಾರತ ಸಂಕಲ್ಪ ದಿನದ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭಾರತದ ವಿಭಜನೆಯ ಸಂದರ್ಭದಲ್ಲಿ ತಮ್ಮ ತಾಯ್ನಾಡು, ಧರ್ಮ ಹಾಗೂ ಸಂಸ್ಕೃತಿಗಾಗಿ ಅನೇಕರು ಪ್ರಾಣತ್ಯಾಗ ಮಾಡಿದ್ದಾರೆ. ಅಂತಹ ವೀರರ ತ್ಯಾಗ ಮತ್ತು ಬಲಿದಾನವನ್ನು ಸ್ಮರಿಸುವುದು ಪ್ರತಿಯೊಬ್ಬ ಹಿಂದೂವಿನ ಕರ್ತವ್ಯವಾಗಿದೆ. ದೇಶದ ಅಖಂಡತೆ, ಸಂಸ್ಕೃತಿ ಮತ್ತು ರಾಷ್ಟ್ರೀಯತೆಯ ರಕ್ಷಣೆಗೆ ಇನ್ನಷ್ಟು ಹಿಂದೂ ಸಮಾಜ ಸಂಘಟಿತವಾಗಿ ಮುನ್ನಡೆಯಬೇಕು ಎಂದು ಅವರು ಹೇಳಿದರು.

ಹಿಂದೂಸ್ಥಾನದ ಪರಿಕಲ್ಪನೆಯಲ್ಲಿ ಇಂದಿನ ಭಾರತ ಮಾತ್ರವಲ್ಲದೆ, ಪಾಕಿಸ್ತಾನ, ಅಫ್ಘಾನಿಸ್ತಾನ, ನೇಪಾಳ, ಶ್ರೀಲಂಕಾ, ಬ್ರಹ್ಮದೇಶ ಸೇರಿದಂತೆ ವಿಶಾಲ ಭೂಭಾಗದ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಸಂಬಂಧಗಳನ್ನು ಸ್ಮರಿಸುವ ಅಗತ್ಯವಿದೆ. ಅಖಂಡ ಹಿಂದೂಸ್ಥಾನದ ಕನಸಿಗಾಗಿ ಬಲಿದಾನಗೈದ ವೀರ ಆತ್ಮಗಳಿಗೆ ಗೌರವ ಸಲ್ಲಿಸುವುದರ ಜೊತೆಗೆ, ದೇಶದ ಏಕತೆ ಮತ್ತು ಅಖಂಡತೆಗಾಗಿ ಪ್ರತಿಯೊಬ್ಬರೂ ಸಂಕಲ್ಪ ಮಾಡಬೇಕು.
ಸ್ವಾತಂತ್ರ್ಯ ಹೋರಾಟದಲ್ಲಿ ಕ್ರಾಂತಿಕಾರಿಗಳ ಪಾತ್ರ ಮಹತ್ವದ್ದಾಗಿದ್ದು, ಅವರ ತ್ಯಾಗ ಮತ್ತು ಹೋರಾಟವನ್ನು ಇತಿಹಾಸದಲ್ಲಿ ಸೂಕ್ತವಾಗಿ ಸ್ಮರಿಸಬೇಕಾಗಿದೆ. ದೇಶ ವಿಭಜನೆಯ ಸಂದರ್ಭದ ರಾಜಕೀಯ ಬೆಳವಣಿಗೆಗಳು ಹಾಗೂ ಸ್ವಾತಂತ್ರ್ಯಾನಂತರದ ಮತ ರಾಜಕಾರಣದ ಕುರಿತು ತಮ್ಮ ನಿಲುವುಗಳನ್ನು ಅವರು ವ್ಯಕ್ತಪಡಿಸಿದರು.

ಪಂಜಿನ ಜಾಥಾದಲ್ಲಿ ಮೊಳಗಿದ ಘೋಷಣೆ: ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ಪಟ್ಟಣದ ಸಿದ್ಧಿವಿನಾಯಕ ದೇವಸ್ಥಾನದಿಂದ ಪಂಜಿನ ಜಾಥಾ ಆರಂಭವಾಯಿತು. ಜಾಥಾವು ಪಟ್ಟಣದ ಪ್ರಮುಖ ಹೆದ್ದಾರಿಯಲ್ಲಿ ಸಂಚರಿಸಿತು.
ಪಂಜಿನ ಜಾಥಾದುದ್ದಕ್ಕೂ “ಭಾರತ ಮಾತಾ ಕೀ ಜೈ”, “ಅಖಂಡ ಹಿಂದೂಸ್ಥಾನ ಕೀ ಜೈ” ಹಾಗೂ “ವಂದೇ ಮಾತರಂ” ಘೋಷಣೆಗಳು ಮೊಳಗಿದವು. ಕಾರ್ಯಕರ್ತರು ಕೈಯಲ್ಲಿ ಪಂಜುಗಳನ್ನು ಹಿಡಿದು ದೇಶಭಕ್ತಿ ಹಾಗೂ ಅಖಂಡ ಭಾರತದ ಸಂಕಲ್ಪವನ್ನು ಪುನರುಚ್ಚರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಟೋ ಪ್ರಕಾಶ್ ವಹಿಸಿದ್ದರು. ಈ ಸಂದರ್ಭದಲ್ಲಿ ಹಿಂಜಾವೇ ಜಿಲ್ಲಾ ಸಂಚಾಲಕ ಪವನ್ ಶಿರಾಳಕೊಪ್ಪ, ಜಿಲ್ಲಾ ನಿಧಿ ಪ್ರಮುಖ್ ದೇವರಾಜ್ ಕೆರೆಹಳ್ಳಿ, ಸಂಜಯ್, ತಾಲೂಕು ಸಂಚಾಲಕ ರಾಘವೇಂದ್ರ, ಮಂಜುನಾಥ್ ಆಚಾರ್,ಆಟೋ ರಾಘು,ಸಂತೋಷ, ಗಣೇಶ್, ಉದಯ್, ಶ್ರೀನಿವಾಸ್ ಆಚಾರ್ ಸೇರಿದಂತೆ ಹಿಂದೂ ಜಾಗರಣ ವೇದಿಕೆಯ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.
ರಂಜನ್ ಆರ್ ಕಾರ್ಯಕ್ರಮ ನಿರೂಪಿಸಿದರು. ನಾಗರತ್ನ ದೇವರಾಜ್ ಪ್ರಾರ್ಥಿಸಿದರು.

















Leave a Reply