ನಿಟ್ಟೂರು: ಪರಿಸರ ಸಂರಕ್ಷಣೆ ಹಾಗೂ ಸ್ವಚ್ಛ ಗ್ರಾಮ ನಿರ್ಮಾಣದ ಸಂಕಲ್ಪದೊಂದಿಗೆ ಹೊಸನಗರ ತಾಲೂಕಿನ ನಿಟ್ಟೂರಿನಲ್ಲಿ ‘ನಮ್ಮೂರ ಪ್ಲಾಸ್ಟಿಕ್ ಸ್ವಚ್ಛತಾ ಅಭಿಯಾನ’ಕ್ಕೆ ಭಾನುವಾರ ಉತ್ಸಾಹಭರಿತ ಚಾಲನೆ ದೊರೆಯಿತು.
ಲಯನ್ಸ್ ಕ್ಲಬ್ ನಿಟ್ಟೂರು–ಸಂಪೇಕಟ್ಟೆ, ಸಂಸ್ಕರಣಾ ಸೇವಾ ಫೌಂಡೇಷನ್ ನಿಟ್ಟೂರು, ಟೀಂ ನವಚೇತನ ನಿಟ್ಟೂರು, ನಗರ ವಲಯ ಅರಣ್ಯ ಇಲಾಖೆ ಸಿಬ್ಬಂದಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ.) ಹಾಗೂ ಅಡಗೋಡಿ ಮತ್ತು ನಿಟ್ಟೂರಿನ ಗ್ರಾಮಸ್ಥರ ಸಹಯೋಗದಲ್ಲಿ ರಾಣೆಬೆನ್ನೂರು–ಬೈಂದೂರು NH-760CC ರಾಷ್ಟ್ರೀಯ ಹೆದ್ದಾರಿಯ ಅಡಗೋಡಿಯಿಂದ ನಿಟ್ಟೂರಿನವರೆಗೆ ಸ್ವಚ್ಛತಾ ಕಾರ್ಯ ಹಮ್ಮಿಕೊಳ್ಳಲಾಯಿತು.
ಭಾನುವಾರ ನಡೆದ ಈ ಅಭಿಯಾನದಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ ನೂರಾರು ಗ್ರಾಮಸ್ಥರು ಉತ್ಸಾಹದಿಂದ ಪಾಲ್ಗೊಂಡರು. ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರವಾಸಿಗರು ಹಾಗೂ ದಾರಿಹೋಕರು ಎಲ್ಲೆಂದರಲ್ಲಿ ಎಸೆದಿದ್ದ ಪ್ಲಾಸ್ಟಿಕ್ ಬಾಟಲಿಗಳು, ಕವರ್ಗಳು ಹಾಗೂ ಇನ್ನಿತರ ತ್ಯಾಜ್ಯಗಳನ್ನು ಕಾರ್ಯಕರ್ತರು ಮತ್ತು ಗ್ರಾಮಸ್ಥರು ಸಂಗ್ರಹಿಸಿದರು.
ಮೊದಲ ಹಂತದಲ್ಲಿ ಸುಮಾರು 6 ಕಿ.ಮೀ. ವ್ಯಾಪ್ತಿಯ ಅಡಗೋಡಿಯಿಂದ ಬೇಳೂರಿನವರೆಗೆ ಸ್ವಚ್ಛತಾ ಕಾರ್ಯ ನಡೆಸಲಾಗಿದ್ದು, ಸುಮಾರು 30ರಿಂದ 40 ದೊಡ್ಡ ಚೀಲಗಳಷ್ಟು ತ್ಯಾಜ್ಯ ಹಾಗೂ ಮೂರು ಗೂಡ್ಸ್ ಆಟೋ ತುಂಬುವಷ್ಟು ಪ್ಲಾಸ್ಟಿಕ್ ಮತ್ತು ಇತರ ಕಸವನ್ನು ಸಂಗ್ರಹಿಸಲಾಯಿತು.
ಸಮಯದ ಅಭಾವದಿಂದ ಬೇಳೂರಿನಿಂದ ನಿಟ್ಟೂರಿನವರೆಗಿನ ಉಳಿದ ಭಾಗದ ಸ್ವಚ್ಛತಾ ಕಾರ್ಯವನ್ನು ಸೆಪ್ಟೆಂಬರ್ 20ರಂದು ಮುಂದುವರಿಸಲು ನಿರ್ಧರಿಸಲಾಗಿದೆ. ಇದೇ ರೀತಿಯಲ್ಲಿ ಹಂತ ಹಂತವಾಗಿ ಸಂಪೂರ್ಣ ನಿಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯನ್ನು ಸ್ವಚ್ಛಗೊಳಿಸುವ ಸಂಕಲ್ಪವನ್ನು ಅಭಿಯಾನದ ಆಯೋಜಕರು ವ್ಯಕ್ತಪಡಿಸಿದರು.
ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಲು ಪರಿಸರವಾದಿ ಕರೆ
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಪರಿಸರವಾದಿ ಸುಬ್ರಹ್ಮಣ್ಯ ಚಕ್ರವಾಕ ಅವರು ಮಾತನಾಡಿ, ಪ್ಲಾಸ್ಟಿಕ್ ತ್ಯಾಜ್ಯದಿಂದ ಪರಿಸರ ಹಾಗೂ ಮಾನವನ ಆರೋಗ್ಯದ ಮೇಲೆ ಉಂಟಾಗುತ್ತಿರುವ ಗಂಭೀರ ಪರಿಣಾಮಗಳ ಕುರಿತು ಅರಿವು ಮೂಡಿಸಿದರು.
ಅಗತ್ಯವಿಲ್ಲದ ಸಂದರ್ಭದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ತಪ್ಪಿಸಬೇಕು. ಅನಿವಾರ್ಯ ಸಂದರ್ಭಗಳಲ್ಲಿ ಮರುಬಳಕೆಗೆ ಯೋಗ್ಯವಾದ ವಸ್ತುಗಳನ್ನು ಬಳಸಬೇಕು. ಪ್ಲಾಸ್ಟಿಕ್ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯದೆ, ಮೂಲದಲ್ಲಿಯೇ ವಿಂಗಡಿಸಿ ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಸ್ವಚ್ಛತೆ ಕೇವಲ ಅಭಿಯಾನವಲ್ಲ, ನಿರಂತರ ಜವಾಬ್ದಾರಿ- ಮಣಿಕಂಠ ಡಿ.ಎಸ್.
‘ನಮ್ಮೂರ ಪ್ಲಾಸ್ಟಿಕ್ ಸ್ವಚ್ಛತಾ ಅಭಿಯಾನ’ದ ಸದಸ್ಯ ಮಣಿಕಂಠ ಡಿ.ಎಸ್. ಮಾತನಾಡಿ, ಪ್ಲಾಸ್ಟಿಕ್ ಇಂದು ಜಗತ್ತಿನ ಪರಿಸರಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಆದ್ದರಿಂದ ಇಂತಹ ಸ್ವಚ್ಛತಾ ಕಾರ್ಯವನ್ನು ಒಂದು ದಿನದ ಕಾರ್ಯಕ್ರಮಕ್ಕೆ ಸೀಮಿತಗೊಳಿಸದೆ ನಿರಂತರವಾಗಿ ನಡೆಸಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮಕ್ಕೆ ಕೊನೆಯ ಕ್ಷಣದಲ್ಲಿ ಮಾಹಿತಿ ನೀಡಿದರೂ ತಮ್ಮ ಕರ್ತವ್ಯ ಪ್ರಜ್ಞೆಯಿಂದ ಭಾನುವಾರದ ರಜಾದಿನದಲ್ಲಿಯೂ ಆರಂಭದಿಂದ ಅಂತ್ಯದವರೆಗೆ ಭಾಗವಹಿಸಿದ ಗ್ರಾಮ ಪಂಚಾಯಿತಿ PDO ವೆಂಕಟೇಶ್ ಮೂರ್ತಿ ಅವರನ್ನು ಅವರು ವಿಶೇಷವಾಗಿ ಶ್ಲಾಘಿಸಿದರು.
ಗ್ರಾಮವನ್ನು ಸ್ವಚ್ಛವಾಗಿ, ಆರೋಗ್ಯಕರವಾಗಿ ಮತ್ತು ಪರಿಸರ ಸ್ನೇಹಿಯಾಗಿ ಉಳಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಸಾರ್ವಜನಿಕರು ಕಸ ಎಸೆಯುವುದನ್ನು ತಪ್ಪಿಸಿ ಸ್ವಚ್ಛತಾ ಕಾರ್ಯಕ್ಕೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಲಯನ್ಸ್ ಕ್ಲಬ್ ನಿಟ್ಟೂರು–ಸಂಪೇಕಟ್ಟೆ ಅಧ್ಯಕ್ಷ ಜಯರಾಮ ಶೆಟ್ಟಿ ಮಾತನಾಡಿ, ಸ್ವಚ್ಛ ಗ್ರಾಮದ ನಿರ್ಮಾಣವೆಂಬುದು ಕೆಲವರ ಕೆಲಸವಲ್ಲ. ಪರಿಸರದ ಬಗ್ಗೆ ಕಾಳಜಿ ಹೊಂದಿರುವ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಇಂತಹ ಪ್ರಯತ್ನಗಳನ್ನು ಪ್ರೋತ್ಸಾಹಿಸುವ ಮೂಲಕ ಮುಂದಿನ ಪೀಳಿಗೆಗೆ ಸ್ವಚ್ಛ ಹಾಗೂ ಆರೋಗ್ಯಕರ ಪರಿಸರವನ್ನು ಉಳಿಸಿಕೊಡಬೇಕು ಎಂದರು.
ಗ್ರಾಮಸ್ಥರ ಸಕ್ರಿಯ ಭಾಗವಹಿಸುವಿಕೆ
ಅಭಿಯಾನದಲ್ಲಿ ಅಡಗೋಡಿ ಶಾಲೆಯ ಮುಖ್ಯೋಪಾಧ್ಯಾಯ ಸತೀಶ್ ಮಾಸ್ಟರ್, ಲಯನ್ ಜಯರಾಮ ಶೆಟ್ಟಿ, ಲಯನ್ ಗೀತೇಶ್ ಬಾಣಸಗದ್ದೆ, ಪಿಡಿಓ ವೆಂಕಟೇಶ್ ಮೂರ್ತಿ, ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ, ಸುಭಾಶ್ ಸಿಡ್ಲುಕುಣಿ,ವಿಘ್ನೇಶ್ ನಿಟ್ಟೂರು, ರವೀಶ್ ಸಿಡ್ಲುಕುಣಿ, ಶರತ್ ಸಿಡ್ಲುಕುಣಿ, ಅಜಿತ್ ಕೆ.ಎಲ್., ಮಂಜುನಾಥ್ ಎಸ್ಟಿಡಿ ನಿಟ್ಟೂರು, ಆದರ್ಶ ದೋಸೆಮಕ್ಕಿ, ವಿಜಯ್ ನಿಟ್ಟೂರು,ಸತೀಶ್ ಶೆಟ್ಟಿ ಲಯನ್ಸ್, ಬಂಡಿಗೆ ಸ್ವಾಮಿ, ವನಜಾ ಅಡಗೋಡಿ, ಡಾ. ನಳಿನಿ ಗಣೇಶ್, ಪ್ರಸನ್ನ, ಸಹೋದರಿಯರಾದ ಕಾವ್ಯ ಮತ್ತು ಮಂದಾರ ಸೇರಿದಂತೆ ಹಲವು ಗ್ರಾಮಸ್ಥರು ಭಾಗವಹಿಸಿದ್ದರು.
ಪ್ಲಾಸ್ಟಿಕ್ ಮುಕ್ತ ಪರಿಸರದ ಕನಸು ಸಾಕಾರಗೊಳ್ಳಬೇಕಾದರೆ ಸರ್ಕಾರದ ಪ್ರಯತ್ನದ ಜೊತೆಗೆ ಜನರ ಸಹಭಾಗಿತ್ವವೂ ಅಗತ್ಯ. ನಿಟ್ಟೂರಿನಲ್ಲಿ ಆರಂಭಗೊಂಡಿರುವ ಈ ಅಭಿಯಾನ, ‘ನನ್ನ ಊರು-ನನ್ನ ಜವಾಬ್ದಾರಿ’ ಎಂಬ ಪರಿಸರ ಕಾಳಜಿಯ ಸಂದೇಶವನ್ನು ಸಾರುವ ಉತ್ತಮ ಮಾದರಿಯಾಗಿದೆ ಈ ತಂಡದ ಕೆಲಸ ಇನ್ನಷ್ಟು ಚೆನ್ನಾಗಿ ನಡೆಯಲಿ ಎಂದು ನಾಡಿ ಮೀಡಿಯಾ ಹೌಸ್ ಆಶಿಸುತ್ತದೆ.

















Leave a Reply