ರಿಪ್ಪನ್ ಪೇಟೆ : ದೇಶದ ಗಡಿಯನ್ನು ಕಾಯುವ ಯೋಧರಂತೆ ರೈತರೂ ದೇಶದ ಯೋಧರು. ಪ್ರತಿಯೊಬ್ಬ ರೈತ ವಿಷಮುಕ್ತ ಆಹಾರ ಬೆಳೆಯುವ ಮೂಲಕ ಸಮಾಜದ ಆರೋಗ್ಯ ಕಾಪಾಡಬೇಕು. ಉಡುಪಿ ಶ್ರೀಕೃಷ್ಣನಿಗೆ ಸಮರ್ಪಿಸುವ ಶುದ್ಧ ನೈವೇದ್ಯದ ಮೂಲಕ ರೈತನ ಬೆಳೆ ಭಗವಂತನ ಸೇವೆಯಾಗಿ ಪರಿವರ್ತನೆಯಾಗಲಿದೆ” ಎಂದು ಸೋದೆ ಶ್ರೀಗಳು ಹೇಳಿದರು.
ಕೊಳವಂಕದ ರಾಮಪ್ಪನಸರದಲ್ಲಿ ಸಾವಯವ ರೈತ ಗಿರೀಶ್ ಅವರ ಸ್ವಗೃಹದಲ್ಲಿ ನಡೆದ ಶುದ್ಧ ನೈವೇದ್ಯ ಸಮರ್ಪಣಂ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀಗಳು, ನಿಜವಾದ ಅಭಿವೃದ್ಧಿ ಎಂದರೆ ದೇಶದ ಆಹಾರ ಭದ್ರತೆಯನ್ನು ಬಲಪಡಿಸುವುದು. ಬರಗಾಲ ಅಥವಾ ಸಂಕಷ್ಟದ ಸಂದರ್ಭಗಳಲ್ಲಿಯೂ ದೇಶದ ಜನತೆಗೆ ವಿಷಮುಕ್ತ ಆಹಾರ ದೊರೆಯುವಂತೆ ಮಾಡುವುದು ಪ್ರತಿಯೊಬ್ಬ ರೈತನ ಕರ್ತವ್ಯ ಎಂದು ಹೇಳಿದರು.

ದೇಶದ ಆಹಾರ ಭದ್ರತೆಯನ್ನು ಬಲಪಡಿಸುವುದು ಮತ್ತು ವಿಷಮುಕ್ತ ಆಹಾರ ಉತ್ಪಾದನೆಗೆ ರೈತರನ್ನು ಪ್ರೇರೇಪಿಸುವ ಉದ್ದೇಶದಿಂದ ಆರಂಭಿಸಿರುವ ‘ಗದ್ದೆಯಿಂದ ಗರ್ಭಗುಡಿಗೆ – ಶುದ್ಧ ನೈವೇದ್ಯ ಸಮರ್ಪಣಂ’ ಯೋಜನೆಯ ಅಂಗವಾಗಿ ಉಡುಪಿ ಸೋದೆ ವಾದಿರಾಜ ಮಠದ ಪೂಜ್ಯ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಹೊಸನಗರ ತಾಲೂಕಿನ ಕೊಳವಂಕದಲ್ಲಿ ಪಾದಯಾತ್ರೆ ನಡೆಸಿ ರೈತರಲ್ಲಿ ಜಾಗೃತಿ ಮೂಡಿಸಿದರು.

ಶ್ರೀಕೃಷ್ಣನಿಗೆ ಪ್ರತಿದಿನ ವಿಭಿನ್ನ ದೇಶಿ ಭತ್ತದ ತಳಿಗಳಿಂದ ನೈವೇದ್ಯ ಸಮರ್ಪಿಸುವ ‘ಶುದ್ಧ ನೈವೇದ್ಯ ಸಮರ್ಪಣಂ’ ಯೋಜನೆಯನ್ನು ಕೃಷಿ ಪ್ರಯೋಗ ಪರಿವಾರ ರೂಪಿಸಿದ್ದು, 2028–30ರ ಸೋದೆ ಪರ್ಯಾಯದಲ್ಲಿ ಈ ಯೋಜನೆಯನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೆ ತರುವ ಉದ್ದೇಶ ಹೊಂದಲಾಗಿದೆ.

ಹೊಸನಗರ ತಾಲೂಕು ಒಂದರಲ್ಲೇ 36 ದೇಶಿ ಭತ್ತದ ತಳಿಗಳನ್ನು ಸಾವಯವ ಪದ್ಧತಿಯಲ್ಲಿ ಬೆಳೆಯುತ್ತಿರುವ ರೈತರ ಸಮೂಹ ಕಾರ್ಯನಿರ್ವಹಿಸುತ್ತಿರುವುದು ಸಂತಸ ತಂದಿದೆ ಎಂದು ಶ್ರೀಗಳು ಮೆಚ್ಚುಗೆ ವ್ಯಕ್ತಪಡಿಸಿದರು. ಸಾವಯವ ಕೃಷಿಕರಿಗೆ ಸಮಾಜದಿಂದ ಹೆಚ್ಚಿನ ಪ್ರೋತ್ಸಾಹ ದೊರೆಯಬೇಕಿದ್ದು, ರೈತರ ಬೆನ್ನಿಗೆ ಸಮಾಜ ನಿಲ್ಲಬೇಕು ಎಂದು ಕರೆ ನೀಡಿದರು.

ಶ್ರೀಗಳ ಕರೆಗೆ ಸ್ಪಂದಿಸಿದ ಶಿವಮೊಗ್ಗ ವಾದಿರಾಜ ಶಿಷ್ಯವೃಂದ ಹಾಗೂ ದೈವಜ್ಞ ಬ್ರಾಹ್ಮಣ ಸಮಾಜದ ಸದಸ್ಯರು ಸೇರಿ 5 ಎಕರೆ ಪ್ರದೇಶದಲ್ಲಿ ಸಾವಯವ ಭತ್ತ ಬೆಳೆಯಲು ಪ್ರೋತ್ಸಾಹ ನೀಡುವುದಾಗಿ ಘೋಷಿಸಿದರು.
ಇದಕ್ಕೂ ಮುನ್ನ ಗ್ರಾಮಸ್ಥರು ಪೂರ್ಣಕುಂಭ ಸ್ವಾಗತದೊಂದಿಗೆ ಶ್ರೀಗಳನ್ನು ಬರಮಾಡಿಕೊಂಡರು.
ಬಳಿಕ ನಡೆದ ಕಾರ್ಯಕ್ರಮದಲ್ಲಿ ಕೃಷಿ ಪ್ರಯೋಗ ಪರಿವಾರದ ಚಕ್ಕೋಡಬೈಲು ಶ್ರೀವತ್ಸ ಮಾತನಾಡಿ, ‘ಬೊಗಸೆ ಭತ್ತ ಬೀಜ’ ಕಾರ್ಯಕ್ರಮದಡಿ ರೈತರು ಬೆಳೆಯುವ ಸಾವಯವ ಅಕ್ಕಿಯನ್ನೇ ಮುಂದಿನ ಸೋದೆ ಮಠದ ಪರ್ಯಾಯದಲ್ಲಿ ಪ್ರತಿದಿನ ಶುದ್ಧ ನೈವೇದ್ಯವಾಗಿ ಉಡುಪಿ ಶ್ರೀಕೃಷ್ಣನಿಗೆ ಸಮರ್ಪಿಸಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಹಾದಿಗಲ್ಲು ಲಕ್ಷ್ಮೀನಾರಾಯಣ, ಸರು ದಿನೇಶ್, ಅರುಣ್, ಆ. ಶ್ರೀ. ಆನಂದ, ಹನಿಯ ರವಿ, ಆರ್ಎಸ್ಎಸ್ ತಾಲೂಕು ಸಂಘಚಾಲಕ ಶ್ಯಾಮಸುಂದರ್, ಅವುಕ ರವೀಂದ್ರ,ಗಿರೀಶ್ ಕೊಳವಂಕ, ಕಿರಣ್ ಕರಡಿಗ, ದಾನೇಶ್ ಆಲುವಳ್ಳಿ ಸೇರಿದಂತೆ ಇನ್ನಿತರರಿದ್ದರು. ಹಲವಾರು ಸಾವಯವ ರೈತರು ಕುಟುಂಬ ಸಮೇತರಾಗಿ ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ಬೆಳ್ಳೂರು ವಸಂತ್ ಕುಮಾರ್ ನಿರೂಪಿಸಿದರು. ಕುಮುದ ಪ್ರಾರ್ಥಿಸಿದರು, ಕುಸುಗೋಡು ಧರ್ಮೇಂದ್ರ ಸ್ವಾಗತಿಸಿದರು ಹಾಗೂ ಯೋಗೇಂದ್ರ ವಂದಿಸಿದರು.














Leave a Reply