ಗ್ಯಾರಂಟಿ ಯೋಜನೆಗಳು ಮುಂದುವರಿಯಲಿವೆ, ಫಲಾನುಭವಿಗಳು ಆತಂಕಪಡಬೇಡಿ: ಪಿ. ಚಿದಂಬರ

Screenshot 20260626 190758 Canva ಗ್ಯಾರಂಟಿ ಯೋಜನೆಗಳು ಮುಂದುವರಿಯಲಿವೆ, ಫಲಾನುಭವಿಗಳು ಆತಂಕಪಡಬೇಡಿ: ಪಿ. ಚಿದಂಬರ
Spread the love

ಹೊಸನಗರ: ಗೃಹಲಕ್ಷ್ಮಿ, ಅನ್ನಭಾಗ್ಯ ಸೇರಿದಂತೆ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಮುಂದುವರಿಯಲಿದ್ದು, ಫಲಾನುಭವಿಗಳು ಯಾವುದೇ ವದಂತಿಗಳಿಗೆ ಕಿವಿಗೊಡಬಾರದು ಎಂದು ಹೊಸನಗರ ತಾಲೂಕು ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಪಿ. ಚಿದಂಬರ ತಿಳಿಸಿದ್ದಾರೆ.

ಹೊಸನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಮಾಜಿಕ ಜಾಲತಾಣಗಳಲ್ಲಿ ಗ್ಯಾರಂಟಿ ಯೋಜನೆಗಳನ್ನು ಸ್ಥಗಿತಗೊಳಿಸಲಾಗುತ್ತದೆ ಎಂಬ ಸುಳ್ಳು ಸುದ್ದಿಗಳು ಹರಿದಾಡುತ್ತಿವೆ. ಸರ್ಕಾರದಿಂದ ಈ ಕುರಿತು ಯಾವುದೇ ಅಧಿಕೃತ ಆದೇಶ ಹೊರಬಿದ್ದಿಲ್ಲ. ಅಧಿಕೃತ ಆದೇಶ ಬರುವವರೆಗೆ ಎಲ್ಲಾ ಯೋಜನೆಗಳು ಯಥಾಸ್ಥಿತಿಯಲ್ಲಿ ಮುಂದುವರಿಯಲಿವೆ ಎಂದು ಸ್ಪಷ್ಟಪಡಿಸಿದರು.

ಅರ್ಹರಲ್ಲದವರು, ಮೃತರ ಹೆಸರಿನಲ್ಲಿ ಅಥವಾ ಒಂದೇ ಹೆಸರಿನಲ್ಲಿ ಹಲವು ಖಾತೆಗಳ ಮೂಲಕ ಯೋಜನೆಗಳ ಸೌಲಭ್ಯ ಪಡೆಯುತ್ತಿರುವುದು ಕಂಡುಬಂದರೆ ಅಂತಹ ಪ್ರಕರಣಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ವಾಣಿಜ್ಯ ಬಳಕೆಗೆ ಗೃಹಜ್ಯೋತಿ ಯೋಜನೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿರುವವರ ವಿರುದ್ಧವೂ ಕ್ರಮ ಜರುಗಿಸಲಾಗುವುದು ಎಂದರು.

ಕೆಎಸ್‌ಆರ್‌ಟಿಸಿ ಡಿಪೋಗೆ ಆಗ್ರಹ
ಶಕ್ತಿ ಯೋಜನೆಯ ಪ್ರಯೋಜನ ಎಲ್ಲರಿಗೂ ಸಿಗುವಂತೆ ಹೊಸನಗರದಲ್ಲಿ ಕೆಎಸ್‌ಆರ್‌ಟಿಸಿ ಡಿಪೋ ಆರಂಭಿಸಬೇಕು. ಸಾಗರ–ಶಿವಮೊಗ್ಗ–ತೀರ್ಥಹಳ್ಳಿ–ಕುಂದಾಪುರ ಮಾರ್ಗದಲ್ಲಿ ಹೆಚ್ಚುವರಿ ಕೆಂಪು ಬಸ್‌ಗಳನ್ನು ಓಡಿಸುವಂತೆ ಸರ್ಕಾರ ಮತ್ತು ಶಾಸಕರ ಗಮನಕ್ಕೆ ತರಲಾಗಿದೆ ಎಂದು ಹೇಳಿದರು.

ನ್ಯಾಯಬೆಲೆ ಅಂಗಡಿಗಳ ಮೇಲ್ವಿಚಾರಣೆ
ತಾಲೂಕಿನ ನ್ಯಾಯಬೆಲೆ ಅಂಗಡಿಗಳಲ್ಲಿ ಗುಣಮಟ್ಟದ ಅಕ್ಕಿ ವಿತರಣೆ ಕುರಿತು ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಪ್ರತಿ ಗ್ರಾಮ ಹೋಬಳಿಯಲ್ಲಿ ಮೂರು ನ್ಯಾಯಬೆಲೆ ಅಂಗಡಿಗಳಿಗೆ ಒಬ್ಬರಂತೆ ಗ್ಯಾರಂಟಿ ಯೋಜನೆ ಸದಸ್ಯರನ್ನು ನೇಮಿಸಲಾಗಿದೆ ಎಂದು ಮಾಹಿತಿ ನೀಡಿದರು.

ತಾಲೂಕಿನಲ್ಲಿ ಒಟ್ಟು 29,011 ಪಡಿತರ ಚೀಟಿದಾರರಿದ್ದು, ಅವರಲ್ಲಿ 28,522 ಮಂದಿ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಾಗಿದ್ದಾರೆ. ಇತ್ತೀಚೆಗೆ 56 ಮಹಿಳೆಯರು ಹೊಸದಾಗಿ ಅರ್ಜಿ ಸಲ್ಲಿಸಿದ್ದು, 36 ಮಹಿಳೆಯರ ನೋಂದಣಿ ಪೂರ್ಣಗೊಂಡಿದೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *