
ಹೊಸನಗರ: ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಪಡೆಯಲು ಆದಾಯ ಪ್ರಮಾಣಪತ್ರ ಹಾಗೂ ಜಾತಿ ಪ್ರಮಾಣಪತ್ರ ಸಲ್ಲಿಸುವುದು ಕಡ್ಡಾಯವಲ್ಲ ಎಂದು ಹೊಸನಗರ ತಹಶೀಲ್ದಾರ್ ಭರತ್ ರಾಜ್ ಸ್ಪಷ್ಟಪಡಿಸಿದ್ದಾರೆ.
ಇತ್ತೀಚೆಗೆ ಕೆಲ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಚೀಟಿದಾರರಿಂದ ಜಾತಿ ಮತ್ತು ಆದಾಯ ಪ್ರಮಾಣಪತ್ರಗಳನ್ನು ಕಡ್ಡಾಯವಾಗಿ ಕೇಳಲಾಗುತ್ತಿದೆ ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ ಅವರು ಈ ಸ್ಪಷ್ಟನೆ ನೀಡಿದ್ದಾರೆ. ಸರ್ಕಾರ ಅಥವಾ ಜಿಲ್ಲಾಡಳಿತದಿಂದ ಈ ಕುರಿತು ಯಾವುದೇ ಅಧಿಕೃತ ಆದೇಶ ಹೊರಡಿಸಿಲ್ಲ ಎಂದು ತಿಳಿಸಿದ್ದಾರೆ.
ಸರ್ಕಾರದ ನಿಯಮಾನುಸಾರ ಎಸ್‌ಸಿ ಹಾಗೂ ಎಸ್‌ಟಿ ವರ್ಗದ ಫಲಾನುಭವಿಗಳು ಅಗತ್ಯವಿರುವ ಸಂದರ್ಭಗಳಲ್ಲಿ ಜಾತಿ ಪ್ರಮಾಣಪತ್ರ ಸಲ್ಲಿಸಬೇಕಾಗಬಹುದು. ಆದರೆ ಇತರ ವರ್ಗದ ಪಡಿತರ ಚೀಟಿದಾರರಿಗೆ ಜಾತಿ ಅಥವಾ ಆದಾಯ ಪ್ರಮಾಣಪತ್ರ ಕಡ್ಡಾಯವಲ್ಲ ಎಂದು ಅವರು ಹೇಳಿದರು.
ಕೆಲ ನ್ಯಾಯಬೆಲೆ ಅಂಗಡಿಗಳಲ್ಲಿ ಪ್ರಮಾಣಪತ್ರ ನೀಡದಿದ್ದರೆ ಪಡಿತರ ವಿತರಿಸುವುದಿಲ್ಲ ಎಂದು ತಿಳಿಸಿರುವ ಕಾರಣ ಸಾರ್ವಜನಿಕರು ಕಂದಾಯ ಇಲಾಖೆ ಹಾಗೂ ಗ್ರಾಮ ಆಡಳಿತಾಧಿಕಾರಿಗಳ ಕಚೇರಿಗಳಿಗೆ ಅಲೆದಾಡುತ್ತಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಸಂಬಂಧಿತ ಅಧಿಕಾರಿಗಳ ಗಮನಕ್ಕೂ ತರಲಾಗಿದೆ ಎಂದು ತಿಳಿಸಿದರು.
ಸರ್ಕಾರದ ಆದೇಶವಿಲ್ಲದೆ ಪಡಿತರ ಚೀಟಿದಾರರಿಗೆ ಜಾತಿ ಅಥವಾ ಆದಾಯ ಪ್ರಮಾಣಪತ್ರ ಕಡ್ಡಾಯಗೊಳಿಸಿ ತೊಂದರೆ ನೀಡುವ ನ್ಯಾಯಬೆಲೆ ಅಂಗಡಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಹಶೀಲ್ದಾರ್ ಭರತ್ ರಾಜ್ ಎಚ್ಚರಿಕೆ ನೀಡಿದ್ದಾರೆ.














Leave a Reply