ಮೂಲೆಗದ್ದೆ ಶ್ರೀಗಳ ನೇತೃತ್ವದಲ್ಲಿ ಬೃಹತ್ ಪಾದಯಾತ್ರೆ
ರಿಪ್ಪನಪೇಟೆ : 2008ರಲ್ಲಿ ಸಾಗರ -ತೀರ್ಥಹಳ್ಳಿ ಕ್ಷೇತ್ರದೊಂದಿಗೆ ವಿಲೀನಗೊಂಡ ಹೊಸನಗರ ವಿಧಾನಸಭಾ ಕ್ಷೇತ್ರವನ್ನು ಮರುಸ್ಥಾಪಿಸಬೇಕೆಂಬ ಬೇಡಿಕೆಗೆ ಚೈತನ್ಯ ತುಂಬುವ ಉದ್ದೇಶದಿಂದ ಏಪ್ರಿಲ್ 5ರಂದು ಬಿದನೂರು ನಗರದಿಂದ ಬೃಹತ್ ಪಾದಯಾತ್ರೆ ಆರಂಭಗೊಳ್ಳಲಿದ್ದು, ಏಪ್ರಿಲ್ 6ರಂದು ಪಟ್ಟಣದ ಪ್ರೌಢಶಾಲಾ ಮೈದಾನದಲ್ಲಿ ಬೃಹತ್ ಬಹಿರಂಗ ಸಭೆ ನಡೆಯಲಿದೆ. ಈ ಹೋರಾಟದ ಯಶಸ್ಸಿಗಾಗಿ ತಾಲೂಕಿನಾದ್ಯಂತ ಮುಂದಾಳುಗಳ ಸರಣಿ ಸಭೆಗಳು ಜೋರಾಗಿದ್ದು, ಜನರಲ್ಲಿ ಹೋರಾಟದ ಕಿಚ್ಚು ಹಚ್ಚುತ್ತಿವೆ.

Hosanagara constituency ಮರುಸ್ಥಾಪನೆಗಾಗಿ ವಿಶೇಷ ಹೋರಾಟ ಸಮಿತಿಯನ್ನು ರಚಿಸಲಾಗಿದ್ದು, ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮದ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿಗಳ ನೇತೃತ್ವದಲ್ಲಿ ಹೋರಾಟಕ್ಕೆ ಬಲ ಸಿಕ್ಕಿದೆ. ಸರ್ವಪಕ್ಷಗಳ ಮುಖಂಡರು, ಹಾಲಿ ಮತ್ತು ಮಾಜಿ ಶಾಸಕರು ಸೇರಿದಂತೆ ವಿವಿಧ ಕ್ಷೇತ್ರಗಳ ನಾಯಕರು ಒಗ್ಗಟ್ಟಿನಿಂದ ಕೈಜೋಡಿಸಿರುವುದು ಗಮನಾರ್ಹ.

ಹೊಸನಗರ ತಾಲೂಕಿನ ರಾಮಚಂದ್ರಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ, ನಿಟ್ಟೂರಿನ ನಾರಾಯಣ ಗುರು ಮಠದ ಶ್ರೀ ರೇಣುಕಾನಂದ ಸ್ವಾಮೀಜಿ, ಹೊಂಬುಜ ಜೈನ ಮಠದ ಶ್ರೀ ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯರು ಹಾಗೂ ಸಾರಗನಜಡ್ಡಿನ ಅವಧೂತ ಯೋಗೇಂದ್ರ ಗುರೂಜಿ ಸೇರಿದಂತೆ ಅನೇಕ ಧಾರ್ಮಿಕ ನಾಯಕ ರಿಂದ ಹೋರಾಟಕ್ಕೆ ಸಾಮಾಜಿಕ ಮತ್ತು ಧಾರ್ಮಿಕ ಬೆಂಬಲ ಹೆಚ್ಚುತ್ತಿದೆ.
ಹೋರಾಟದ ರೂಪುರೇಷೆಯ ಭಾಗವಾಗಿ ಪಾದಯಾತ್ರೆಯ ಮಾರ್ಗಸೂಚಿ ಈಗಾಗಲೇ ಸಿದ್ಧಗೊಂಡಿದ್ದು, ಯಾತ್ರಿಕರ ಅನುಕೂಲಕ್ಕಾಗಿ ದಾರಿಯುದ್ದಕ್ಕೂ ಕುಡಿಯುವ ನೀರು, ಉಪಹಾರ, ವಿಶ್ರಾಂತಿ ಹಾಗೂ ಊಟದ ವ್ಯವಸ್ಥೆಯನ್ನು ಸಂಘಟಕರು ಕಲ್ಪಿಸಿದ್ದಾರೆ. ಕರಪತ್ರ ವಿತರಣೆ, ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ, ಧ್ವನಿವರ್ಧಕಗಳ ಮೂಲಕ ಜಾಗೃತಿ ಮೂಡಿಸುವ ಕಾರ್ಯ ಭರದಿಂದ ಸಾಗುತ್ತಿದೆ.
ಸುಮಾರು 45 ಕಿಲೋಮೀಟರ್ ದೂರದ ಈ ಪಾದಯಾತ್ರೆಯಲ್ಲಿ ಹೊಸನಗರ ಹಾಗೂ ರಿಪ್ಪನ್‌ಪೇಟೆಗಳಲ್ಲಿ ಎರಡು ಪ್ರಮುಖ ಸಭೆಗಳನ್ನು ಆಯೋಜಿಸಲಾಗಿದೆ. ಏಳು ರಿಂದ ಎಂಟು ಸಾವಿರ ಜನರು ಭಾಗವಹಿಸುವ ನಿರೀಕ್ಷೆಯಿದ್ದು, ಈ ಮೂಲಕ ಸರ್ಕಾರದ ಗಮನ ಸೆಳೆದು ಕ್ಷೇತ್ರ ಮರುಸ್ಥಾಪನೆಗೆ ಒತ್ತಡ ತರಲು ಹೋರಾಟ ಸಮಿತಿ ತೀರ್ಮಾನಿಸಿದೆ.
ಒಟ್ಟಿನಲ್ಲಿ, ಹೊಸನಗರ ಕ್ಷೇತ್ರ ಮರುಸ್ಥಾಪನೆಗಾಗಿ ನಡೆಯುತ್ತಿರುವ ಈ ಪಾದಯಾತ್ರೆ ಮತ್ತು ಬಹಿರಂಗ ಸಭೆ ರಾಜಕೀಯವಾಗಿ ಹಾಗೂ ಸಾಮಾಜಿಕವಾಗಿ ಮಹತ್ವ ಪಡೆದಿದೆ.















Leave a Reply