ಹುಂಚ: “ಪ್ರತಿಯೊಬ್ಬರೂ ಸಮಗ್ರ ವಿದ್ಯಾಭ್ಯಾಸಕ್ಕೆ ಪ್ರಾಮುಖ್ಯತೆ ನೀಡಬೇಕಿದೆ. ಪೋಷಕರು ಮಕ್ಕಳಿಗೆ ಸಮಯೋಚಿತವಾಗಿ ಉತ್ತಮ ಶಿಕ್ಷಣದತ್ತ ಪ್ರೇರಣೆ ನೀಡಿದರೆ, ಅವರಲ್ಲಿ ಪ್ರತಿಭೆ, ಸಂಯಮ ಹಾಗೂ ಶಿಸ್ತು ಸ್ವಾಭಾವಿಕವಾಗಿ ಬೆಳೆಯುತ್ತದೆ” ಎಂದು ಹೊಂಬುಜ ಅತಿಶಯ ಶ್ರೀಕ್ಷೇತ್ರದ ಜೈನ ಮಠದ ಪೀಠಾಧೀಶರಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರು ತಿಳಿಸಿದರು.
ಪರಂಜ್ಯೋತಿ ಆಂಗ್ಲಮಾಧ್ಯಮ ಕಿರಿಯ, ಹಿರಿಯ ಹಾಗೂ ಪ್ರೌಢಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಅನುಗ್ರಹ ಸಂದೇಶ ನೀಡಿದ ಅವರು, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳಿಗೆ ಸಮರ್ಪಕ ಶಿಕ್ಷಣದ ಜೊತೆಗೆ ಶಿಸ್ತು, ಸಂಯಮ ಹಾಗೂ ಮೌಲ್ಯಾಧಾರಿತ ಬದುಕಿನ ಅರಿವು ಅಗತ್ಯವಿದೆ ಎಂದು ತಿಳಿಸಿದರು. ಪೋಷಕರು ಮಕ್ಕಳ ಶಿಕ್ಷಣದ ಜವಾಬ್ದಾರಿಯನ್ನು ಅರಿತು ನಿರಂತರ ಪ್ರೋತ್ಸಾಹ ನೀಡಬೇಕೆಂದು ಕರೆ ನೀಡಿದರು.

ಶಿಕ್ಷಕರು ವಿದ್ಯಾರ್ಥಿಗಳ ಜೀವನವನ್ನು ರೂಪಿಸುವ ಶಿಲ್ಪಿಗಳಾಗಿದ್ದು, ಅವರ ನಿಷ್ಠೆಯ ಸೇವೆ ವಿದ್ಯಾರ್ಥಿಗಳ ಸಾಧನೆಯ ಹಿಂದೆ ಇರುವ ಮೌನ ಶಕ್ತಿ ಎಂದು ಮಹಾಸ್ವಾಮೀಜಿಗಳು ಶ್ಲಾಘಿಸಿದರು. ಶಿಕ್ಷಣ ಸಂಸ್ಥೆಗಳ ಬೆಳವಣಿಗೆಗೆ ಸಮಾಜದ ಸಹಕಾರ ಅತ್ಯಗತ್ಯವೆಂದರು.
ಒಂಬತ್ತನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ್ದ ವಿವಿಧ ಕ್ರೀಡಾ, ಸಾಂಸ್ಕೃತಿಕ ಹಾಗೂ ಸಾಹಿತ್ಯ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ, ಉತ್ತಮ ಅಂಕ ಗಳಿಸಿದವರಿಗೆ ಅಭಿನಂದನೆ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆಯ ಸಿ.ಆರ್.ಪಿ. ಶ್ರೀ ತೀರ್ಥಪ್ಪ ಹಾಗೂ ಟ್ರಸ್ಟಿ ಶ್ರೀ ರತ್ನಕುಮಾರ್ ಉಪಸ್ಥಿತರಿದ್ದು, ಶಾಲೆಯ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಶ್ರೀ ಜಿ. ಮಂಜಪ್ಪ ಹಾಗೂ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪದ್ಮಾವತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ವಿದ್ಯಾರ್ಥಿಗಳಿಂದ ನಡೆದ ಮನೋರಂಜನಾ ಕಾರ್ಯಕ್ರಮಗಳು ವೇದಿಕೆಗೆ ಜೀವ ತುಂಬಿದವು. ಪೋಷಕರು ಮತ್ತು ಊರಿನ ವಿದ್ಯಾಭಿಮಾನಿಗಳ ಹಾಜರಾತಿಯಿಂದ ಶಾಲಾ ವಾರ್ಷಿಕೋತ್ಸವ ಸಾರ್ಥಕವಾಗಿ ನೆರವೇರಿತು.













Leave a Reply