ರಿಪ್ಪನ್ ಪೇಟೆ: ಪ್ರಖ್ಯಾತ ಗಣಪತಿ ವಿಗ್ರಹ ಕಲಾವಿದ ಶಿವಾನಂದಪ್ಪ ಜಿ.ಪಿ (81) ಅವರು ಭಾನುವಾರ ಮಧ್ಯಾಹ್ನ ಸುಮಾರು 2:30ರ ವೇಳೆಗೆ ಲೋ ಬಿಪಿ ಹಿನ್ನೆಲೆ ಹೃದಯಾಘಾತದಿಂದ ನಿಧನ ಹೊಂದಿದರು. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಅಕಸ್ಮಾತ್ ಉಂಟಾದ ಆರೋಗ್ಯ ಸಮಸ್ಯೆಯಿಂದ ಅಗಲಿದ ಸುದ್ದಿ ಸ್ಥಳೀಯರಲ್ಲಿ ದುಃಖ ಮೂಡಿಸಿದೆ.
ಮೂಲತಃ ಹಾರನಹಳ್ಳಿ ಗ್ರಾಮದವರಾದ ಅವರು, ಕಳೆದ ಸುಮಾರು 59 ವರ್ಷಗಳಿಂದ ರಿಪ್ಪನ್ ಪೇಟೆಯಲ್ಲಿ ಗಣಪತಿ ವಿಗ್ರಹ ನಿರ್ಮಾಣದಲ್ಲಿ ತೊಡಗಿ ತಮ್ಮದೇ ಆದ ವಿಶಿಷ್ಟ ಗುರುತು ಮೂಡಿಸಿಕೊಂಡಿದ್ದರು. ತಮ್ಮ ನೈಪುಣ್ಯ, ಭಕ್ತಿ ಭಾವ ಮತ್ತು ಕಲಾತ್ಮಕತೆಯಿಂದ ರೂಪುಗೊಂಡ ಅವರ ಗಣಪತಿ ವಿಗ್ರಹಗಳು ಹೊಸನಗರ ತಾಲ್ಲೂಕು ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಗಣಪತಿ ಹಬ್ಬದಲ್ಲಿ ಪೂಜಿಸಲ್ಪಡುತ್ತಿತ್ತು.
ವಿಶೇಷವಾಗಿ ರಿಪ್ಪನ್ ಪೇಟೆಯ ಹಿಂದೂ ಮಹಾಸಭಾ ಗಣಪತಿ ಉತ್ಸವಕ್ಕೆ ನಿರಂತರವಾಗಿ 5 ದಶಕಗಳ ಕಾಲ ವಿಗ್ರಹಗಳನ್ನು ನಿರ್ಮಿಸುವ ಮೂಲಕ ಅವರು ದೀರ್ಘಕಾಲ ಸೇವೆ ಸಲ್ಲಿಸಿದ್ದು, ಅವರ ಕಲಾ ಸೇವೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಅವರ ಕೈಚಳಕದಲ್ಲಿ ಮೂಡಿದ ಪ್ರತಿಯೊಂದು ಗಣಪತಿ ವಿಗ್ರಹವೂ ಭಕ್ತರ ಮನಗಳಲ್ಲಿ ಭಕ್ತಿ ಮತ್ತು ಭಾವನೆಯನ್ನು ಮೂಡಿಸುವಂತಹದ್ದಾಗಿತ್ತು. ಈಗ ಅವರ ಕಲಾ ಸೇವೆಯನ್ನು ಮೊಮ್ಮಗ ಪವನ್ ಮುಂದುವರೆಸಿದ್ದಾನೆ.
ಅವರು ಇಬ್ಬರು ಹೆಣ್ಣುಮಕ್ಕಳು, ಒಬ್ಬ ಪುತ್ರ ಹಾಗೂ ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಸೋಮವಾರ ಸ್ವಗೃಹ ಹಾರನಹಳ್ಳಿಯಲ್ಲಿ ಮಧ್ಯಾಹ್ನ 12 ಗಂಟೆಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಸಂತಾಪ ವ್ಯಕ್ತಪಡಿಸಿದವರು: ಇವರ ನಿಧನಕ್ಕೆ ಆರ್‌ಎಸ್‌ಎಸ್ ಸಂಘಚಾಲಕರಾದ ತಳಲೆ ಶ್ಯಾಮ್ ಸುಂದರ್, ಶಾಸಕ ಆರಗ ಜ್ಞಾನೇಂದ್ರ, ಶಾಸಕ ಬೇಳೂರು ಗೋಪಾಲಕೃಷ್ಣ, ಮಾಜಿ ಗ್ರಾ. ಪಂ ಉಪಾಧ್ಯಕ್ಷ ಸುಧೀಂದ್ರ ಪೂಜಾರಿ ಅವರು ಸಂತಾಪ ಸೂಚಿಸಿದ್ದು, ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರ ಸೇನಾ (ಹಿಂದೂ ಮಹಾಸಭಾ), ಹಿಂದೂಪರ ಸಂಘಟನೆಗಳು ಮತ್ತು ಸುತ್ತಮುತ್ತಲಿನ ಎಲ್ಲಾ ಗಣಪತಿ ಸಮಿತಿಯವ ರಿಂದ ಸಂತಾಪ ವ್ಯಕ್ತಪಡಿಸಲಾಗಿದೆ.
ಶಿವಾನಂದಪ್ಪ ಅವರ ಅಗಲಿಕೆ ಸ್ಥಳೀಯ ಕಲಾ ವಲಯಕ್ಕೆ ತುಂಬಲಾರದ ನಷ್ಟವಾಗಿದ್ದು, ಅವರ ಸೃಜನಶೀಲ ಕಲೆ ಸದಾ ಜನಮನಗಳಲ್ಲಿ ಜೀವಂತವಾಗಿಯೇ ಉಳಿಯಲಿವೆ.
















Leave a Reply