ಶಿವಮೊಗ್ಗ: ನಗರದ ಮೃಗಾಲಯದಲ್ಲಿ ಕಳೆದ ಕೆಲವು ದಿನಗಳಿಂದ ಅಸ್ವಸ್ಥವಾಗಿದ್ದ ನೀರಾನೆ ಮಂಗಳವಾರ (ಏ.14) ಮೃತಪಟ್ಟಿದೆ. ಸುಮಾರು 12 ವರ್ಷದ ಈ ನೀರಾನೆ ಗರ್ಭಧಾರಣೆಯ ಸಮಸ್ಯೆಯಿಂದಾಗಿ ಹಾಗೂ ಸೋಂಕಿನಿಂದ ಬಳಲುತ್ತಿದ್ದು, ನೀಡಿದ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ನೀರಾನೆ ಇತ್ತೀಚೆಗೆ ವೈದ್ಯೆ ಡಾ. ಸಮೀಕ್ಷಾ ರೆಡ್ಡಿ ಸಾವಿಗೆ ಕಾರಣವಾಗಿದ್ದದ್ದು ಗಮನಾರ್ಹ. ಗರ್ಭಿಣಿಯಾಗಿದ್ದ ನೀರಾನೆಗೆ ಚಿಕಿತ್ಸೆ ನೀಡಲು ತೆರಳಿದ್ದ ವೇಳೆ ಮಾರ್ಚ್ 20ರಂದು ಅದು ಡಾ. ಸಮೀಕ್ಷಾ ಮೇಲೆ ದಾಳಿ ನಡೆಸಿತ್ತು. ಗಂಭೀರವಾಗಿ ಗಾಯಗೊಂಡಿದ್ದ ವೈದ್ಯೆ ಚಿಕಿತ್ಸೆ ಫಲಕಾರಿಯಾಗದೇ ನಂತರ ಮೃತಪಟ್ಟಿದ್ದರು.

ಬಳಿಕ ನೀರಾನೆಯ ಆರೋಗ್ಯದಲ್ಲಿ ಏರುಪೇರಾಗಿದ್ದು, ಅವಧಿ ಮೀರಿದರೂ ಮರಿ ಹಾಕಿರಲಿಲ್ಲ. ಇದರಿಂದ ಅನುಮಾನಗೊಂಡು ಬನ್ನೇರುಘಟ್ಟ ಹಾಗೂ ಮೈಸೂರು ಮೃಗಾಲಯದ ತಜ್ಞ ವೈದ್ಯರು ಪರೀಕ್ಷೆ ನಡೆಸಿದರು. ಪರಿಶೀಲನೆಯಲ್ಲಿ ಮರಿ ಹೊಟ್ಟೆಯೊಳಗೆ ಸಾವಿಗೀಡಾಗಿರುವುದು ಹಾಗೂ ಅದರ ಪರಿಣಾಮವಾಗಿ ಸೋಂಕು ಉಂಟಾಗಿದೆ ಎಂಬುದು ತಿಳಿದುಬಂದಿತು.
ಗರ್ಭ ಸ್ವಚ್ಛತೆಗೆ ಸಂಬಂಧಿಸಿದಂತೆ ವೈದ್ಯರು ಔಷಧೋಪಚಾರ ಮುಂದುವರೆಸಿದರೂ, ನೀರಾನೆಯ ಸ್ಥಿತಿ ಹದಗೆಟ್ಟಿತ್ತು. ದಾಳಿ ನಡೆಸುವ ಮೂರು ದಿನಗಳ ಮುಂಚೆಯೇ ಆಹಾರ ತ್ಯಜಿಸಿದ್ದ ನೀರಾನೆ, ಕಳೆದ 20 ದಿನಗಳಿಂದಲೂ ಸರಿಯಾಗಿ ಆಹಾರ ಸೇವಿಸಿರಲಿಲ್ಲ ಎನ್ನಲಾಗಿದೆ.
ಈ ಘಟನೆ ಮೃಗಾಲಯದ ನಿರ್ವಹಣೆ ಹಾಗೂ ಪಶುವೈದ್ಯಕೀಯ ಸುರಕ್ಷತೆ ಕುರಿತು ಹಲವು ಪ್ರಶ್ನೆಗಳನ್ನು ಎಬ್ಬಿಸಿದೆ.














Leave a Reply