ವಿದ್ಯುತ್ ಕಡಿತದಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಪರದಾಟ!
ರಿಪ್ಪನ್ ಪೇಟೆ: ಸಮೀಪದ ತಳಲೆ ಗ್ರಾಮದಲ್ಲಿ ಟ್ರಾನ್ಸ್‌ಫಾರ್ಮರ್ (ಟಿಸಿ) ಸುಟ್ಟು ಹೋಗಿರುವ ಕಾರಣ ಕಳೆದ 7 ದಿನಗಳಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಗ್ರಾಮಸ್ಥರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ವಿದ್ಯುತ್ ಇಲ್ಲದ ಕಾರಣ ಜಮೀನಿನ ಬಾವಿ ಹಾಗೂ ಮೋಟಾರ್‌ಗಳಿಗೆ ವಿದ್ಯುತ್ ಸಿಗದೆ ಅಡಿಕೆ ತೋಟಗಳಿಗೆ ನೀರು ಹಾಕಲು ಸಾಧ್ಯವಾಗದೆ ಬೆಳೆ ಹಾಳಾಗುವ ಸ್ಥಿತಿ ನಿರ್ಮಾಣವಾಗಿದೆ. ಜೊತೆಗೆ ಕುಡಿಯುವ ನೀರಿಗೂ ತೊಂದರೆ ಉಂಟಾಗಿದ್ದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಸಮಸ್ಯೆಗೆ ತಕ್ಷಣ ಪರಿಹಾರ ಒದಗಿಸುವಂತೆ ಆಗ್ರಹಿಸಿ ತಳಲೆ ಗ್ರಾಮಸ್ಥರು ರಿಪ್ಪನ್ ಪೇಟೆಯ ಮೆಸ್ಕಾಂ ಕಚೇರಿ ಮುಂಭಾಗದಲ್ಲಿ ದಿಢೀರನೆ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ರೈತ ಚಂದ್ರಶೇಖರ್, “ಗ್ರಾಮದಲ್ಲಿ ಟಿಸಿ ಸುಟ್ಟು ಹೋಗಿ ಏಳು ದಿನಗಳಾದರೂ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ. ನೀರಿಲ್ಲದೆ ಅಡಿಕೆ ತೋಟಗಳು ಹಾಳಾಗುತ್ತಿವೆ. ಒಂದು ಕಡೆ ಕುಡಿಯಲು ಸಹ ನೀರಿಲ್ಲ , ಮತ್ತೊಂದು ಕಡೆ ಕತ್ತಲಲ್ಲಿ ಬದುಕುವ ಪರಿಸ್ಥಿತಿ ಎದುರಾಗಿದೆ. ಕೂಡಲೇ ಹೊಸ ಟಿಸಿ ಅಳವಡಿಸಬೇಕು” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ಕಗ್ಗಲಿ ಲಿಂಗಪ್ಪ, “ಹೊಸ ಟಿಸಿ ಅಳವಡಿಸುವವರೆಗೆ ನಮ್ಮ ಹೋರಾಟ ಮುಂದುವರಿಯಲಿದೆ. ಮೆಸ್ಕಾಂ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಪರಿಹರಿಸಬೇಕು. ಇಲ್ಲವಾದರೆ ಅಹೋರಾತ್ರಿ ಧರಣಿ ನಡೆಸುತ್ತೇವೆ” ಎಂದು ಎಚ್ಚರಿಸಿದರು.
ಸ್ಥಳಕ್ಕೆ ಆಗಮಿಸಿದ ಮೆಸ್ಕಾಂ ಸಹಾಯಕ ಎಂಜಿನಿಯರ್ ಅಶ್ವಲ್ ಮಾತನಾಡಿ, “ರೈತರ ಸಮಸ್ಯೆಯನ್ನು ನಾವು ಅರಿತಿದ್ದೇವೆ. ಹಿರಿಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದೇವೆ. ಸಾಗರದಿಂದ ಸಂಜೆಯೊಳಗೆ ಹೊಸ ಟಿಸಿ ತರಲಾಗುತ್ತದೆ. ರೈತರ ಕಷ್ಟಗಳಿಗೆ ಇಲಾಖೆ ಖಂಡಿತ ಸ್ಪಂದಿಸುತ್ತದೆ” ಎಂದು ಭರವಸೆ ನೀಡಿದರು.
ಆದರೂ ಟಿಸಿ ಅಳವಡಿಸುವವರೆಗೆ ಹೋರಾಟ ನಿಲ್ಲಿಸುವುದಿಲ್ಲ ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದರು. “ಇದೀಗ ದ್ವಿತೀಯ ಪಿಯುಸಿ ಪರೀಕ್ಷೆಗಳು ನಡೆಯುತ್ತಿದ್ದು ವಿದ್ಯುತ್ ಇಲ್ಲದ ಕಾರಣ ಮಕ್ಕಳಿಗೆ ಓದಲು ಸಾಧ್ಯವಾಗುತ್ತಿಲ್ಲ. ಫೆಬ್ರವರಿ 22ರಂದು ಸಹ ಮನವಿಯನ್ನು ಸಲ್ಲಿಸಲಾಗಿತ್ತು ತದನಂತರ ಈಗ ಕಳೆದ 5-6 ದಿನಗಳಿಂದ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ” ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮಸ್ಥರ ಆರೋಪದ ಪ್ರಕಾರ, “ಪ್ರತಿ ಬಾರಿ ಟಿಸಿ ಹೋದಾಗಲೂ ನಾವು ಹಣ ಹಾಕಿ ಗಾಡಿ ಬಾಡಿಗೆ ಮಾಡಿಕೊಂಡು ಟಿಸಿ ತರಬೇಕಾಗುತ್ತದೆ. ಈಗ ನಮಗೂ ಸಾಕಾಗಿದೆ. ಹೊಸ ಟಿಸಿ ಹಾಕುವಂತೆ ಕೇಳಿದರೆ ಸರ್ಕಾರದ ಬಳಿ ಅನುದಾನವಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಬೆಳ್ಳೂರು ತಿಮ್ಮಪ್ಪ, ಶ್ಯಾಮಸುಂದರ, ನಾಗರತ್ನ, ಗೌರಮ್ಮ, ಶ್ರೇಯಸ್, ಮಂಜಪ್ಪ, ಮಾಳಿ ಕೊಲಪ್ಪ, ಮಂಜಪ್ಪ, ಕೆ ಸಿ ಷಣ್ಮುಖಪ್ಪ, ವಾಸು ಪೂಜಾರಿ, ಗಿರೀಶ್ ಕಗ್ಗಲಿ, ಯುವರಾಜ್ ಕಗ್ಗಲಿ, ಕಾರ್ತಿಕ್, ಬಸವರಾಜ್, ರಮೇಶ್ ಮಾಳಿ, ಯುವರಾಜ್, ಸೇರಿದಂತೆ ಹಲವು ಗ್ರಾಮಸ್ಥರು ಉಪಸ್ಥಿತರಿದ್ದರು.
ಗ್ರಾಮೀಣ ಭಾಗದ ಸಂಕಷ್ಟ:
ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಹಾಗೂ ಮೂಲಸೌಕರ್ಯ ಸಮಸ್ಯೆಗಳು ಇನ್ನೂ ಗಂಭೀರವಾಗಿಯೇ ಮುಂದುವರಿದಿವೆ. ಒಂದು ಟಿಸಿ ದೋಷ ಉಂಟಾದರೂ ದಿನಗಟ್ಟಲೆ ವಿದ್ಯುತ್ ಸಂಪರ್ಕ ಸಿಗದೆ ರೈತರು ಹಾಗೂ ಗ್ರಾಮಸ್ಥರು ಸಂಕಷ್ಟ ಅನುಭವಿಸುವ ಸ್ಥಿತಿ ಸಾಮಾನ್ಯವಾಗಿದೆ. ಕೃಷಿ ಅವಲಂಬಿತವಾಗಿರುವ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯದಿಂದ ಬೆಳೆಗಳಿಗೆ ನೀರು ಸಿಗದೆ ರೈತರಿಗೆ ಭಾರಿ ನಷ್ಟ ಉಂಟಾಗುತ್ತಿದೆ. ಮೂಲಭೂತ ಸೌಕರ್ಯಗಳನ್ನು ತ್ವರಿತವಾಗಿ ಒದಗಿಸುವಲ್ಲಿ ಅಧಿಕಾರಿಗಳು ಹೆಚ್ಚಿನ ಗಮನ ಹರಿಸಬೇಕು ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.
















Leave a Reply