
ರಿಪ್ಪನ್ಪೇಟೆ: ದೇಶಸೇವೆಯಲ್ಲಿ ಸುಮಾರು 38 ವರ್ಷಗಳ ಕಾಲ ವಿವಿಧ ಪ್ರದೇಶಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಸೈನಿಕ ಕೆ.ವಿ ಕೃಷ್ಣಮೂರ್ತಿ ಅವರಿಗೆ ರಿಪ್ಪನ್ಪೇಟೆಯಲ್ಲಿ ಭವ್ಯ ಸ್ವಾಗತ ಕೋರಲಾಯಿತು.

ಪಟ್ಟಣದ ಸಿದ್ದಪ್ಪನಗುಡಿ ಯಿಂದ ಆರಂಭವಾದ ಮೆರವಣಿಗೆಯಲ್ಲಿ ದೇಶಾಭಿಮಾನಿಗಳು, ಗ್ರಾಮಸ್ಥರು ಹಾಗೂ ವಿವಿಧ ಸಂಘಟನೆಗಳ ಸದಸ್ಯರು ಮಳೆಯ ನಡುವೆಯೂ ಉತ್ಸಾಹಭರಿತವಾಗಿ ಭಾಗವಹಿಸಿ ಸೈನಿಕರನ್ನು ಬರಮಾಡಿಕೊಂಡರು. ಡೊಳ್ಳು ಕುಣಿತ, ಜೈಕಾರಗಳು ಹಾಗೂ ದೇಶಭಕ್ತಿ ಘೋಷಣೆಗಳು ಮೆರವಣಿಗೆಯ ವಿಶೇಷ ಆಕರ್ಷಣೆಯಾಗಿದ್ದವು.
ಕೆ.ವಿ ಕೃಷ್ಣಮೂರ್ತಿ ಅವರು ಸಿಆರ್ಪಿಎಫ್, ಆರ್ಎಎಫ್ ಹಾಗೂ ಬ್ಲಾಕ್ ಕ್ಯಾಟ್ ಕಮಾಂಡೋ ಘಟಕಗಳಲ್ಲಿ ಸೇವೆ ಸಲ್ಲಿಸಿದ್ದು, ದೇಶದ ಅನೇಕ ಗಣ್ಯತಿ ಗಣ್ಯರ ಅಂಗರಕ್ಷಕರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಅಸ್ಸಾಂ, ಪಂಜಾಬ್, ನಾಗಾಲ್ಯಾಂಡ್, ಶ್ರೀನಗರ, ಆಂಧ್ರ ಪ್ರದೇಶ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ತಮ್ಮ ಸೇವಾ ಅವಧಿಯಲ್ಲಿ ಸಬ್ ಇನ್ಸ್ಪೆಕ್ಟರ್ ಹುದ್ದೆಗೆ ಬಡ್ತಿ ಹೊಂದಿ ಇದೀಗ ನಿವೃತ್ತಿ ನಂತರ ಸ್ವಗ್ರಾಮಕ್ಕೆ ಮರಳಿದ್ದಾರೆ.
ದೇಶಕ್ಕಾಗಿ ದುಡಿದ ಸೈನಿಕನಿಗೆ ಗೌರವ ಸೂಚಿಸುವ ಉದ್ದೇಶದಿಂದ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರು ಅದ್ದೂರಿ ಸ್ವಾಗತ ನೀಡಿ ಅಭಿನಂದಿಸಿದರು. ಮೆರವಣಿಗೆ ವಿನಾಯಕ ವೃತ್ತದಲ್ಲಿ ಸಮಾಪ್ತಿಗೊಂಡ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಹಿಂದೂ ಜಾಗರಣ ವೇದಿಕೆ ಮತ್ತು ವಿವಿಧ ಸಂಘಟನೆಗಳು, ಸಾರ್ವಜನಿಕರು ಸೈನಿಕರನ್ನು ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ ಹೈಕೋರ್ಟ್ ವಕೀಲರಾದ ರಂಜನ್ ಆರ್ ಸ್ವಾಗತಿಸಿ,ವಂದಿಸಿದರು.
ಈ ಸಂದರ್ಭದಲ್ಲಿ ನಿವೃತ್ತ ಸೈನಿಕ ಕೆ.ವಿ ಕೃಷ್ಣಮೂರ್ತಿ ಅವರ ಪತ್ನಿ ಶಿಕ್ಷಕಿ ಸೌಭಾಗ್ಯ ಹೆಚ್.ಎ., ಪುತ್ರ ಹಿತೇಶ್ ಕೆ., ಪುತ್ರಿ ತಿಲಕಶ್ರೀ, ನಿವೃತ್ತ ಸೈನಿಕರ ಸಂಘದ ಪದಾಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.

















Leave a Reply